Select Your Language

Notifications

webdunia
webdunia
webdunia
webdunia

ಬಿಜೆಪಿ ಪಾದಯಾತ್ರೆ ಮೂರನೇ ದಿನ ಕೆಂಗಲ್ ನಿಂದ ಶುರು: ಸಿದ್ದರಾಮಯ್ಯ ಗ್ಯಾರಂಟಿ ಎಂದು ಕೂಗಿದ ಕಾರ್ಯಕರ್ತರು

BJP Padayatra

Krishnaveni K

ಬೆಂಗಳೂರು , ಸೋಮವಾರ, 5 ಆಗಸ್ಟ್ 2024 (12:12 IST)
ಬೆಂಗಳೂರು: ಮೈಸೂರು ಚಲೋ ಪಾದಯಾತ್ರೆಯ ಮೂರನೇ ದಿನವಾದ ಇಂದು ಕೆಂಗಲ್‌ನಲ್ಲಿ ಕೆಂಗಲ್ ಶ್ರೀ ಹನುಮಂತ ಸ್ವಾಮಿಯ ಆಶೀರ್ವಾದ ಪಡೆದು ಪಾದಯಾತ್ರೆ ಆರಂಭಗೊಂಡಿತು.

ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಮತ್ತು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಬಿಜೆಪಿ- ಜೆಡಿಎಸ್ ಜಂಟಿಯಾಗಿ ಈ ಪಾದಯಾತ್ರೆಯನ್ನು ಆಯೋಜಿಸಿವೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂಪಾಯಿ ಅವ್ಯವಹಾರ, ಮೈಸೂರು ಮುಡಾದಲ್ಲಿ ಸುಮಾರು 5 ಸಾವಿರ ಕೋಟಿ ಮೊತ್ತದ ಅವ್ಯವಹಾರ ಸಂಬಂಧ ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಿ ಮತ್ತು ಈ ಹಗರಣಗಳ ಸಿಬಿಐ ತನಿಖೆಗೆ ಆಗ್ರಹಿಸಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಸಾವಿರಾರು ಜನರು ಭಾಗವಹಿಸುತ್ತಿದ್ದಾರೆ.

ರಾಜ್ಯ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್‌ಕುಮಾರ್, ಶಾಸಕರಾದ ಅರವಿಂದ ಬೆಲ್ಲದ್, ಚನ್ನಬಸಪ್ಪ, ಸಿ.ಕೆ.ರಾಮಮೂರ್ತಿ, ರವಿಸುಬ್ರಹ್ಮಣ್ಯ, ಬಸವರಾಜ ಮತ್ತಿಮೊಡ, ಎಚ್.ಕೆ.ಸುರೇಶ್, ಡಾ.ಶೈಲೇಂದ್ರ ಬೆಲ್ದಾಳೆ, ಮಾಜಿ ಸಚಿವರಾದ ಬೈರತಿ ಬಸವರಾಜ್, ಪ್ರಭು ಚೌಹಾಣ್, ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮೊದಲಾದ ಮುಖಂಡರು ಇಂದಿನ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.

ಸಿದ್ದರಾಮಯ್ಯ ರಾಜೀನಾಮೆ ಗ್ಯಾರಂಟಿ, ಗ್ಯಾರಂಟಿ
ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ ಧಿಕ್ಕಾರ, ಸಿದ್ದರಾಮಯ್ಯ ರಾಜೀನಾಮೆ ಗ್ಯಾರಂಟಿ, ಗ್ಯಾರಂಟಿ ಎಂಬ ಘೋಷಣೆ ಕೂಗಲಾಯಿತು. ತೊಲಗಲಿ ತೊಲಗಲಿ ಕಾಂಗ್ರೆಸ್ ತೊಲಗಲಿ, ಜನವಿರೋಧಿ ಭ್ರಷ್ಟ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ, ನಿಗಮದ ಹಣ ವಾಪಸ್ ಕೊಡಿ ಇಲ್ಲವಾದರೆ ರಾಜೀನಾಮೆ ಕೊಡಿ, ನಮ್ಮ ಬೇಡಿಕೆ ಈಡೇರಿಸಿ ಇಲ್ಲವಾದರೆ ರಾಜೀನಾಮೆ ಕೊಡಿ, ರಾಜೀನಾಮೆ ಕೊಡಿ, ರಾಜೀನಾಮೆ ಕೊಡಿ, ಸಿದ್ದರಾಮಯ್ಯ ರಾಜೀನಾಮೆ ಕೊಡಿ ಎಂಬಿತ್ಯಾದಿ ಘೋಷಣೆಗಳನ್ನು ಕೂಗಲಾಯಿತು.

ಎರಡೂ ಪಕ್ಷಗಳ ಮುಖಂಡರು, ಪದಾಧಿಕಾರಿಗಳು, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಸಂಸದರು, ಮಾಜಿ ಸಂಸದರು, ಶಾಸಕರು, ಮಾಜಿ ಶಾಸಕರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಗಂಗಾ ಕಲ್ಯಾಣ ಯೋಜನೆಯಡಿ ಉಚಿತ ಕೊಳವೆ ಬಾವಿ ಸೌಲಭ್ಯ ಪಡೆಯುವುದು ಹೇಗೆ ಇಲ್ಲಿದೆ ಡೀಟೈಲ್ಸ್