Publish Date: Wed, 28 Nov 2018 (13:46 IST)
Updated Date: Wed, 28 Nov 2018 (13:49 IST)
ಹಾಸನ : ನಟ ವಿಷ್ಣುವರ್ಧನ ಸ್ಮಾರಕ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ನಟ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ವಿರುದ್ಧ ಸಿಎಂ ಎಚ್.ಡಿ.ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದಾರೆ.
ನಟ ಅನಿರುದ್ಧ್ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಸ್ಮಾರಕ ನಿರ್ಮಾಣ ಮಾಡಲಿ ಎಂದು ಹೇಳಿರುವ ಕಾರಣ ಕೋಪಗೊಂಡ ಸಿಎಂ, ‘ಪದ ಬಳಕೆ ಮಾಡುವಾಗ ಪದಗಳ ಗಾಂಭೀರ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕು. ಕಲಾವಿದರು ಮಾಡಿದ ಕೆಲಸಕ್ಕೆ ಸರ್ಕಾರ ಗೌರವ ಕೊಟ್ಟಿದ್ದೇವೆ’ ಎಂದು ಕಿಡಿಕಾರಿದ್ದಾರೆ.
‘ವಿಷ್ಣುವರ್ಧನ್ ಅವರು ನಿಧನರಾದಾಗ ನಾನು ಸಿಎಂ ಆಗಿರಲಿಲ್ಲ. ನಿಧನದ ಸುದ್ದಿ ತಿಳಿದಾಗ ನಾನು ಅವರ ಮನೆಗೆ ಹೋಗಿ ದರ್ಶನ ಪಡೆದಿದ್ದೇನೆ. ಆ ವೇಳೆ ಭಾರತಿ ವಿಷ್ಣುವರ್ಧನ್ ಮತ್ತು ನಟ ಶಿವರಾಂ ಅವರಲ್ಲಿ ಅಂತ್ಯಕ್ರಿಯೆ ಸಿದ್ಧತೆ ಬಗ್ಗೆ ಕೇಳಿದ್ದೇನೆ. ಅಂದು ಅವರು ಬನಶಂಕರಿಯ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದರು.
ವಿಷ್ಣುವರ್ಧನ್ ಓರ್ವ ದೊಡ್ಡ ಕಲಾವಿದರಾಗಿದ್ದು, ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಿದ್ರೆ ತಪ್ಪಾಗುತ್ತದೆ. ಅಂದು ಅಂಬರೀಶ್ ಅವರ ಜೊತೆ ಮಾತನಾಡಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ಬೇಡ ಅಂತಾ ಹೇಳಿ ಸರ್ಕಾರಕ್ಕೆ ತಿಳಿಸಿ ಎಂದು ಮನವಿ ಮಾಡಿಕೊಂಡಿದ್ದೆ. ಆದ್ರೆ ಇಂದು ವಿಷ್ಣುವರ್ಧನ್ ಅಳಿಯ ಉಡಾಫೆ ಮುಖ್ಯಮಂತ್ರಿ ಎಂಬ ಹೇಳಿಕೆ ನೀಡಿರುವುದು ನನಗೆ ನೋವು ತಂದಿದೆ’ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.