ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಸಿ.ಪಿ ಯೋಗೇಶ್ವರ್ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆಂಬ ಸುದ್ದಿ ಮೂಲಗಳಿಂದ ತಿಳಿದುಬಂದಿದೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಚುನಾವನಾ ಅಖಾಡ ರಂಗೇರಿದೆ. ಬಿಜೆಪಿ ಅಥವಾ ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಇಂಗಿತವನ್ನು ಯೋಗೇಶ್ವರ್ ವ್ಯಕ್ತಪಡಿಸಿದ್ದರು. ಆದರೆ ಚನ್ನಪಟ್ಟಣ ಕ್ಷೇತ್ರವನ್ನು ಕುಮಾರಸ್ವಾಮಿ ಬಿಟ್ಟುಕೊಡಲು ಒಪ್ಪದ ಕಾರಣ ಇದೀಗ ನಿಖಿಲ್ ಕುಮಾರಸ್ವಾಮಿ ಮತ್ತೊಮ್ಮೆ ಚುನಾವಣಾ ಕಣಕ್ಕೆ ಇಳಿಯುವ ಸಾಧ್ಯತೆಯಿದೆ.
ಕೊನೆ ಕ್ಷಣದವರೆಗೂ ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಸಿಪಿವೈಗೆ ಬಿಜೆಪಿ ಕಡೆಯಿಂದ ಯಾವುದೇ ಶುಭ ಸುದ್ದಿ ಸಿಗದ ಕಾರಣ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಇಂದು ಬೆಳಗ್ಗೆ ಮಾತನಾಡಿದ್ದ ಯೋಗೇಶ್ವರ್, ಜೆಡಿಎಸ್ ಚಿನ್ಹೆಯಿಂದ ಸ್ಪರ್ಧೆ ಕುರಿತು ನೀಡಿದ್ದ ಆಫರ್ ಅನ್ನು ನಾನು ತಿರಸ್ಕರಿಸಿದ್ದೇನೆ. ನಾನು ಸ್ವತಂತ್ರವಾಗಿ ಸ್ಪರ್ಧಿಸುವ ಯೋಚನೆ ಇದೆ. ಇನ್ನೂ ಎರಡು ದಿನ ಕಾದು ನೋಡುವ ತಂತ್ರವನ್ನು ಉಪಯೋಗಿಸುತ್ತೇನೆ. ನಾನು ಈ ಕ್ಷಣಕ್ಕೂ ಬಿಜೆಪಿಯಿಂದ ಸ್ಪರ್ಧೆ ಮಾಡಬೇಕು ಎಂದುಕೊಂಡಿದ್ದೇನೆ. ಇಂದು (ಅ.21) ಬೆಳಗ್ಗೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಾರೆ ಎಂದು ನಮ್ಮ ಜಿಲ್ಲಾಧ್ಯಕ್ಷರು ಎಂದು ಹೇಳಿದ್ದರು. ಹಾಗಂದ್ಮೇಲೆ ಇನ್ನೇನಿದೆ, ಆಯ್ತು ಒಳ್ಳೇದಾಗಲಿ ಎಂದು ಶುಭ ಹಾರೈಸುತ್ತೇನೆ ಎಂದು ಅಸಮಾಧಾನ ಹೊರಹಾಕಿದ್ದರು.