Publish Date: Fri, 05 May 2023 (12:14 IST)
Updated Date: Fri, 05 May 2023 (12:16 IST)
ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಪರವಾಗಿ ಭರ್ಜರಿ ಪ್ರಚಾರದಲ್ಲಿ ತೊಡಗಿರುವ ಪ್ರಧಾನಿ ನರೇಂದ್ರ ಮೋದಿ ರಾಜ್ಯಾದ್ಯಂತ ರೋಡ್ ಶೋಗಳನ್ನು ನಡೆಸುತ್ತಿದ್ದಾರೆ.
ಇದೀಗ ಶನಿವಾರ ಹಾಗೂ ಭಾನುವಾರ ರಾಜಧಾನಿ ಬೆಂಗಳೂರಿನಲ್ಲಿ ನಡೆಯಬೇಕಿದ್ದ ರೋಡ್ ಶೋನಲ್ಲಿ ಮತ್ತೆ ಬದಲಾವಣೆ ಮಾಡಲಾಗಿದೆ. ಮೋದಿ ರೋಡ್ ಶೋ ನಡೆಯಲಿರುವ ದಿನ ಪ್ರಮುಖ ರಸ್ತೆಗಳನ್ನು ಬಂದ್ ಮಾಡುವುದಾಗಿ ಪೊಲೀಸರು ಸೂಚನೆ ನೀಡಿದ್ದಾರೆ.
ಶನಿವಾರ ಬೆಳಗ್ಗೆ 10 ಗಂಟೆಯಿಂದ 12:30 ರವರೆಗೆ ರೋಡ್ ಶೋ ನಡೆಯಲಿದೆ. ಇದು ಜೆಪಿ ನಗರ ಬ್ರಿಗೇಡ್ ಮಿಲೇನಿಯಂನಿಂದ ಮಲ್ಲೇಶ್ವರಂ ಸರ್ಕಲ್ ಮಾರಮ್ಮ ಟೆಂಪಲ್ ವರೆಗೆ ನಡೆಯಲಿದೆ. ಭಾನುವಾರ ಬೆಳಗ್ಗೆ 10 ಗಂಟೆಯಿಂದ 11:30 ರವರೆಗೆ ರೋಡ್ ಶೋ ನಡೆಯಲಿದ್ದು, ಇದು ಸುರಂಜನ್ ದಾಸ್ ಸರ್ಕಲ್ ನಿಂದ ಟ್ರಿನಿಟಿ ಸರ್ಕಲ್ ವರೆಗೆ ಸಾಗಲಿದೆ. ಮಾತ್ರವಲ್ಲದೇ ಭಾನುವಾರ ನಡೆಯುವ ರೋಡ್ ಶೋದಲ್ಲಿ 4 ಕಿ.ಮೀ ಕಡಿತ ಮಾಡಲಾಗಿದೆ.
ಈ ಬಾರಿ ಮೋದಿ ಬೆಂಗಳೂರಿನ 18 ವಿಧಾನಸಭಾ ಕ್ಷೇತ್ರಗಳಲ್ಲಿ ರೋಡ್ ಶೋ ನಡೆಸಲಿದ್ದಾರೆ. ಮೋದಿ ರೋಡ್ ಶೋ ಸಾಗುವ ಮಾರ್ಗದಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದೆ. ಸುಮಾರು 37 ಕಿ.ಮೀ ರೋಡ್ ಶೋ ನಡೆಯಲಿದ್ದು, ದಾರಿಯುದ್ದಕ್ಕೂ ಬಿಗಿ ಭದ್ರತೆಯನ್ನು ಮಾಡಲಾಗಿದೆ.