ಬೆಂಗಳೂರು: ಬಿಬಿಎಂಪಿಗೆ ಚುನಾವಣೆ ಮುಂದೂಡುತ್ತ ಹೋಗುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಚ್ಯುತಿ ಬರುವ ಕೆಲಸ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಈಗ ಗ್ರೇಟರ್ ಬೆಂಗಳೂರು ಎನ್ನುತ್ತಿದ್ದಾರೆ. ಬ್ರ್ಯಾಂಡ್ ಬೆಂಗಳೂರು ಎನ್ನುತ್ತಿದ್ದವರು ಈಗ ಗ್ರೇಟರ್ ಬೆಂಗಳೂರಿಗೆ ಯಾಕೆ ಹೋದರು? ಬ್ರ್ಯಾಂಡ್ ಬೆಂಗಳೂರು ಮಾಡಲು ಆಗದವರು ಯಾವ ಗ್ರೇಟರ್ ಬೆಂಗಳೂರು ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಬೆಂಗಳೂರನ್ನು 7 ಭಾಗ ಮಾಡುವುದು ಸರಿಯಾದ ಕ್ರಮ ಅಲ್ಲ; ಗ್ರೇಟರ್ ಬೆಂಗಳೂರು ಮಾಡಿ ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ಛಿದ್ರಗೊಳಿಸಲು ನೀವು ಹೊರಟಿದ್ದೀರಿ ಎಂದು ಆಕ್ಷೇಪಿಸಿದರು. ಇದು ಬೆಂಗಳೂರನ್ನು ಒಗ್ಗಟ್ಟಾಗಿ ಇಟ್ಟು ಉತ್ತಮವಾಗಿ ಬೆಳೆಸಬೇಕೆಂಬ ನೀತಿ ಅಲ್ಲ ಎಂದು ಟೀಕಿಸಿದರು.
ಮೇಯುವವರಿಗೆ ಅವಕಾಶ ಸಿಗುತ್ತದೆಯೇ ಹೊರತು
ಈಗಾಗಲೇ ವಿಚ್ಛಿದ್ರಕಾರಿ ಜನರು ಬಂದು ಬೆಂಗಳೂರನ್ನು ಹಾಳು ಮಾಡಿದ್ದಾರೆ. ಎಲ್ಲಿ ಬಾಂಬ್ ಹಾಕಬೇಕೋ, ಎಲ್ಲಿ ಏನೇನು ಮಾಡಬೇಕೋ ಅದನ್ನೆಲ್ಲ ಮಾಡುತ್ತಿದ್ದಾರೆ. ಅಂಥವುಗಳನ್ನು ತಡೆದು ಬೆಂಗಳೂರನ್ನು ಇನ್ನಷ್ಟು ಸುಭದ್ರಗೊಳಿಸಬೇಕಿದೆ. ಇದೆಲ್ಲ ಬಿಟ್ಟು ಆರು ಭಾಗ, ಏಳು ಭಾಗ ಮಾಡಿ ಆರೋ ಏಳೇ ಮೇಯರ್ ಮಾಡಲು ಹೊರಟಿದ್ದೀರಿ. ಮೇಯುವವರಿಗೆ ಅವಕಾಶ ಸಿಗುತ್ತದೆಯೇ ಹೊರತು ಬೆಂಗಳೂರನ್ನು ಕಟ್ಟುವವರಿಗೆ ಅವಕಾಶ ಕೊಡಬೇಕಲ್ಲವೇ? ಸರಕಾರ ಅದರಲ್ಲಿ ಎಡವಿದೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದರು.
ರಾಜೀನಾಮೆ ಕೊಟ್ಟು ತೊಲಗಿ ಹೋಗಲು ಆಗ್ರಹ
ಪ್ರಶ್ನೆಗೆ ಉತ್ತರಿಸಿದ ಅವರು, ದೇವರು ಬಂದರೂ ಬೆಂಗಳೂರನ್ನು ಕಾಪಾಡಲಾಗದು ಎಂದರೆ ನಿಮ್ಮ ಕೆಲಸ ಏನು ಎಂದು ಪ್ರಶ್ನಿಸಿದರು. ನೀವು ಬಿಟ್ಹಾಕಿ. ರಾಜೀನಾಮೆ ಕೊಡಿ; ತೊಲಗಿ ಹೋಗಿ ಎಂದು ಒತ್ತಾಯಿಸಿದರು. ಬಂದವರು ಯಾರೋ ಆಡಳಿತ ಮಾಡುತ್ತಾರೆ ಎಂದು ಸವಾಲು ಹಾಕಿದರು. ನಿಮಗಿಂತ ಚೆನ್ನಾಗಿ ನಾವು ಬೆಂಗಳೂರು ಕಟ್ಟಬಲ್ಲೆವು. ನಾವು ಮಾಡುತ್ತೇವೆ ಎಂದು ತಿಳಿಸಿದರು.
ಬೆಂಗಳೂರಿನ ಅಭಿವೃದ್ಧಿ ಅಸಾಧ್ಯ ಎಂಬರ್ಥದ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕೈಲಾಗದವರು ಮೈ ಪರಚಿಕೊಂಡರಂತೆ; ಹಾಗೆ ಮಾಡುತ್ತೇವೆ, ಹೀಗೆ ಮಾಡುತ್ತೇವೆಂದು ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ. ಅವರು ಇನ್ನೂ ಗ್ಯಾರಂಟಿಗಳಿಂದ ಹೊರಬಂದೇ ಇಲ್ಲ; ಈ ಗ್ಯಾರಂಟಿಯೇ ನಮ್ಮನ್ನು ಬಹಳ ಕಾಲ ರಕ್ಷಿಸುತ್ತದೆ ಎಂದು ಅವರು ತಿಳಿದುಕೊಂಡಿದ್ದಾರೆ. ಗ್ಯಾರಂಟಿಗಳ ವಾರಂಟಿ ಈಗಾಗಲೇ ಕಳೆದುಹೋಗಿದೆ ಎಂದು ತಿಳಿಸಿದರು.
ಕಾನೂನು- ಸುವ್ಯವಸ್ಥೆ ಕಾಪಾಡಲು ನಿಮ್ಮಿಂದ ಆಗುತ್ತಿಲ್ಲ
ಕನ್ನಡದ ಜನರ ಮೇಲೆ ಇವತ್ತು ಗಡಿಭಾಗದಲ್ಲಿ ದಾಳಿ ನಡೆದಿದೆ. ಪುಂಡಾಟಿಕೆ ನಡೆಯುತ್ತಿದೆ. ನಿಮ್ಮ ಆಡಳಿತ ವ್ಯವಸ್ಥೆ ಕುಸಿದುಬಿದ್ದಿದೆ. ಕಾನೂನು- ಸುವ್ಯವಸ್ಥೆ ಕಾಪಾಡಲು ನಿಮ್ಮಿಂದ ಆಗುತ್ತಿಲ್ಲ. ಒಂದೆಡೆ ಪೊಲೀಸ್ ಠಾಣೆಗಳ ಮೇಲೆ ಕಲ್ಲು ತೂರಾಟ, ಬೆಂಕಿ ಹಚ್ಚುವ ಕೆಲಸ ನಡೆಯುತ್ತಿದೆ. ನನ್ನ ಬ್ರದರ್ ಎಂದು ಸರ್ಟಿಫಿಕೇಟ್ ಕೊಡುತ್ತೀರಲ್ಲವೇ? ಈಗ ನಿಮ್ಮ ಬ್ರದರ್‍ಗಳಿಗೆ ಬುದ್ಧಿ ಹೇಳಿ ಎಂದು ಆಗ್ರಹಿಸಿದರು.
ಟ್ರೋಲ್ ಮಿನಿಸ್ಟರ್ ಮಾತನಾಡಲಿ ಎಂದು ಒತ್ತಾಯಿಸಿದರು. ಪೊಲೀಸ್ ಅಧಿಕಾರಿಗಳು ಶಾಸಕರನ್ನು ಎದೆಗೆ ಕೈಯಿಟ್ಟು ನೂಕುತ್ತಾರೆ. ಹೊರಕ್ಕೆ ದಬ್ಬುತ್ತಾರೆ. ಇದೆಲ್ಲದಕ್ಕೂ ಟ್ರೋಲ್ ಮಿನಿಸ್ಟರ್ ಉತ್ತರ ಕೊಡಬೇಕೆಂದು ಆಗ್ರಹವನ್ನು ಮುಂದಿಟ್ಟರು. ಕನ್ನಡಿಗ ಕಂಡಕ್ಟರ್ ಮೇಲೆ ಪುಂಡಾಟಿಕೆ ನಡೆದಿದೆ ಎಂದು ಆಕ್ಷೇಪಿಸಿದರು.
ಕೋರಮಂಗಲದಲ್ಲಿ ನಿನ್ನೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಪೊಲೀಸರು ಈ ಘಟನೆಗೆ ಬೇರೆ ಬೇರೆ ರೀತಿಯ ಆಯಾಮಗಳನ್ನೂ ನೀಡಿದ್ದಾರೆ. ಪುಂಡಾಟಿಕೆ ತಡೆಯಲಾಗದೆ ಬೇರೆ ಬೇರೆ ಆಯಾಮ ಕಲ್ಪಿಸುತ್ತಿದ್ದಾರೆ ಎಂದು ಟೀಕಿಸಿದರು. ನಿಮ್ಮ ಸರಕಾರದಿಂದ ಜನರು ಉತ್ತಮವಾದುದನ್ನು ಬಯಸುವ ಪರಿಸ್ಥಿತಿ ಇಲ್ಲ ಎಂದು ನುಡಿದರು.
ಮುಡಾ ವಿಚಾರದಲ್ಲಿ ಜೈಲಿಗೆ ಹೋಗುವುದು ಖಚಿತ
ಮುಖ್ಯಮಂತ್ರಿಗಳು ಮುಡಾ ಮೂಡಿನಲ್ಲೇ ಇದ್ದಾರೆ. ಅವರ ಮೂಡ್ ಇನ್ನೂ ಬದಲಾಗಿಲ್ಲ. ಮುಡಾ ಅವರನ್ನು ಕಾಡುತ್ತಿದೆ. ಮುಡಾ ಇಲ್ಲಿಗೇ ನಿಲ್ಲುವಂಥದ್ದಲ್ಲ. ನೀವು ಯಾರಿಂದ ಏನು ಬೇಕಾದರೂ ಸರ್ಟಿಫಿಕೇಟ್ ತೆಗೆದುಕೊಳ್ಳಿ. ಈ ದೇಶದ ಕಾನೂನು ಸತ್ತಿಲ್ಲ. ಕೋರ್ಟ್‍ಗಳು ಉತ್ತಮವಾಗಿಯೇ ನಡೆಯುತ್ತಿದ್ದು, ನ್ಯಾಯ ಕೊಡುವ ಕೆಲಸ ಮಾಡಿಯೇ ಮಾಡುತ್ತವೆ. ಮುಡಾ ವಿಚಾರದಲ್ಲಿ ನೀವು ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಸವಾಲು ಹಾಕಿದರು.