Publish Date: Wed, 05 Aug 2026 (17:36 IST)
Updated Date: Wed, 05 Aug 2026 (17:38 IST)
ಬೆಂಗಳೂರು: ಕೆಪಿಎಸ್ಸಿ ಕೆಟ್ಟ ಕಾರಣಗಳಿಗೆ ಸುದ್ದಿಯಾಗುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.
ಅವರು ಇಂದು ಫ್ರೀಡಂ ಪಾರ್ಕ್ ನಲ್ಲಿ ಕೆ.ಪಿ.ಎಸ್.ಸಿ ಯ ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದ ಭ್ರಷ್ಟಾಚಾರದ ಕುರಿತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ವಿದ್ಯಾರ್ಥಿಗಳು (ಎಬಿವಿಪಿ) ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದರು. ರಾಜ್ಯ ಸರಕಾರವು ವಿದ್ಯಾರ್ಥಿ, ಯುವಜನರ ಬೇಡಿಕೆ ಈಡೇರಿಸಬೇಕು. ಎಲ್ಲ ಹಗರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿದರು.
ಕೆಪಿಎಸ್‍ಸಿ, ವಿದ್ಯಾರ್ಥಿಗಳ ಭವಿಷ್ಯದಲ್ಲಿ ಆಟ ಆಡುವುದನ್ನು ನಿಲ್ಲಿಸಬೇಕು. ಕೆ.ಪಿ.ಎಸ್.ಸಿ ಯ ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದ ಭ್ರಷ್ಟಾಚಾರದ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಹೇಳುವುದಾಗಿ ಕೆಪಿಎಸ್‍ಸಿ ಅಧ್ಯಕ್ಷ ಮತ್ತು ಸದಸ್ಯರು ಹೇಳಿದ್ದಾಗಿ ವಿವರಿಸಿದರು. ಕೆ.ಪಿ.ಎಸ್.ಸಿ ಯ ಭ್ರಷ್ಟಾಚಾರ ಇವತ್ತಿನದಲ್ಲ; ಬಹುಕಾಲದಿಂದ ನಡೆದು ಬಂದಿದೆ. ಈಗ ಎಲ್ಲೆ ಮೀರಿ ಹೋಗಿದೆ ಎಂದು ಆಕ್ಷೇಪಿಸಿದರು. ನಮ್ಮ ಹೋರಾಟ ನಿಂತಿಲ್ಲ. ಕೆ.ಪಿ.ಎಸ್.ಸಿ, ಪಶು ವೈದ್ಯಾಧಿಕಾರಿಗಳ ನೇಮಕಾತಿ ಮೊದಲಾದವುಗಳ ವಿಚಾರದಲ್ಲಿ ಹೋರಾಟ ಮುಂದುವರೆಯಲಿದೆ ಎಂದರು.
ಹೋರಾಟ ಮಾಡುವ ನಿಮ್ಮ ಜೊತೆ ನಮ್ಮ ಪಕ್ಷ ನಿಲ್ಲಲಿದೆ. ನಮ್ಮ ಮುಖಂಡ ಶಶೀಲ್ ನಮೋಶಿ ಅವರೂ ಬಂದಿದ್ದಾರೆ. ಸದನದ ಒಳಗಡೆಯೂ ಹೋರಾಟ ನಡೆಯಲಿದೆ ಎಂದು ಭರವಸೆ ನೀಡಿದರು. ನೀಟ್ ಪ್ರತಿಭಟನೆ ಸಂದರ್ಭದಲ್ಲಿ ದೇಶದ್ರೋಹ ಮಾಡುವ ಪ್ರತಿಯೊಬ್ಬರೂ, ಹೊರದೇಶದಲ್ಲಿದ್ದರೂ ವಿಮಾನದಲ್ಲಿ ಕರೆಸಿ ಹೋರಾಟ ಮಾಡಿದ್ದರು. ಈಗ ಅವರಿಗೊಂದು ಆಯಾಮ ಸಿಕ್ಕಿದೆ. ಪಂಜಾಬ್‍ನಲ್ಲಿ ಇದೇ ಥರ ಸೋರಿಕೆ ಆಗಿದೆಯಲ್ಲವೇ? ಯಾರು ಹೋರಾಟ ಮಾಡಿದ್ದಾರೆ? ಕೋಕ್ರೋಚ್‍ಗಳು ಎಲ್ಲಿ ಹೋದವು ಎಂದು ಪ್ರಶ್ನಿಸಿದರು.
ನಮಗೆ ಕರ್ನಾಟಕದ ಸಮಸ್ಯೆ ಮುಖ್ಯ. ನಮ್ಮ ವಿದ್ಯಾರ್ಥಿಗಳು, ಯುವಜನರಿಗೆ ಅನ್ಯಾಯ ಆಗುವುದನ್ನು ಸಹಿಸುವುದಿಲ್ಲ ಎಂದರು. ಕರ್ನಾಟಕದಲ್ಲಿ ಪೊಲೀಸ್ ಕಾನ್‍ಸ್ಟೆಬಲ್ ಪರೀಕ್ಷೆ ನಡೆಯಿತು. ಉತ್ತರ ಪತ್ರಿಕೆಗಳನ್ನು ಅದಲು ಬದಲಾಗಿ ಮಾಡಿದರು. ಜವಾಬ್ದಾರಿಯುತ ಸಚಿವರು ಅಹಂಕಾರದ ಮಾತನಾಡಿದ್ದಾರೆ ಎಂದು ಟೀಕಿಸಿದರು. ಅವರಿಗೆ ಗೃಹ ಸಚಿವರಾಗಲು ಅರ್ಹತೆ ಇದೆಯೇ ಎಂದು ಕೇಳಿದರು. ಅವರ ಗುಲ್ಬರ್ಗದ ಸ್ವಂತ ಕಾನೂನು ಕಾಲೇಜಿನಲ್ಲಿ ಪ್ರಶ್ನೆಪತ್ರಿಕೆಗಳನ್ನು ಕೊಡುವ ಮೊದಲೇ ಉತ್ತರಪತ್ರಿಕೆಗಳಲ್ಲಿ ಉತ್ತರ ಬರೆಸಿದ್ದು ದೊಡ್ಡ ಸುದ್ದಿ ಆಗಿದೆ. ಎಲ್ಲರ ರಾಜೀನಾಮೆ ಕೇಳುವ ಅವರು ಯಾಕೆ ರಾಜೀನಾಮೆ ಕೊಟ್ಟಿಲ್ಲ? ಇವತ್ತೇ, ನಾಳೆಯೇ? ಉದ್ಧಟತನ ಬಹಳ ದಿನ ನಡೆಯದು. ರಾಜೀನಾಮೆ ಕೊಡಲೇಬೇಕಾಗುತ್ತದೆ ಎಂದು ತಿಳಿಸಿದರು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ