ಬೆಂಗಳೂರು: ರೌಡಿ ಶೀಟರ್ ಶಿವು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಆರ್ ಪುರಂ ಶಾಸಕ ಬೈರತಿ ಬಸವರಾಜ್ ಬಂಧನ ಭೀತಿಯಲ್ಲಿದ್ದು ಕೋರ್ಟ್ ಮೊರೆ ಹೋಗಿದ್ದಾರೆ.
ನಿವೇಶನ ಮಾರಾಟಕ್ಕೆ ಸಂಬಂಧಿಸಿದಂತೆ ಜಗದೀಶ್ ಎಂಬಾತ ಮತ್ತು ಆತನ ಸಹಚರರು ರೌಡಿ ಶೀಟರ್ ಶಿವು ಎಂಬಾತನನ್ನು ಕೊಲೆ ಮಾಡಿದ್ದಾರೆ ಎಂಬುದು ಆರೋಪವಾಗಿದೆ. ಈ ಸಂಬಂಧ ಜಗದೀಶ್ ಎ1 ಆರೋಪಿಯಾಗಿದ್ದಾನೆ. ಪ್ರಕರಣದಲ್ಲಿ ಶಾಸಕ ಬೈರತಿ ಬಸವರಾಜ್ ಅವರನ್ನು ಎ5 ಆರೋಪಿಯನ್ನಾಗಿ ಮಾಡಲಾಗಿದೆ.
ತಮ್ಮ ವಿರುದ್ಧ ಕೊಲೆ ಪ್ರಕರಣ ದಾಖಲಾಗುತ್ತಿದ್ದಂತೇ ಬೈರತಿ ಬಸವರಾಜ್ ಕೋರ್ಟ್ ಮೊರೆ ಹೋಗಿದ್ದಾರೆ. ಈ ಪ್ರಕರಣದಿಂದ ತಮ್ಮನ್ನು ಕೈ ಬಿಡುವಂತೆ ಮತ್ತು ಬಂಧಿಸದಂತೆ ಬೈರತಿ ಬಸವರಾಜ್ ಕೋರ್ಟ್ ಮೊರೆ ಹೋಗಿದ್ದಾರೆ.
ಈ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ಉದ್ದೇಶಪೂರ್ವಕವಾಗಿ ನನ್ನ ಹೆಸರು ಸೇರಿಸಲಾಗಿದೆ. ಎಫ್ಐಆರ್ ನಿಂದ ನನ್ನ ಹೆಸರು ತೆಗೆಯಲು ಕಾನೂನು ಸಮರ ಮಾಡುತ್ತೇನೆ ಮತ್ತು ಗೃಹಸಚಿವ ಜಿ ಪರಮೇಶ್ವರ್ ಅವರಿಗೂ ಮನವಿ ಮಾಡುತ್ತೇನೆ ಎಂದು ಶಾಸಕರು ಹೇಳಿದ್ದಾರೆ.