ಬೆಂಗಳೂರು: ಜನರ ಕಷ್ಟಕ್ಕೆ ರಾಜ್ಯ ಸರ್ಕಾರದ ಬಳಿ ದುಡ್ಡಿಲ್ಲ. ಆದರೆ ಸರ್ಕಾರಕ್ಕೆ ಹೆಲಿಕಾಪ್ಟರ್ ಖರೀದಿಸುವ ಚಿಂತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಟೀಕಿಸಿದ್ದಾರೆ.
ರಾಜ್ಯ ಸರ್ಕಾರ ಇನ್ನು ಮುಂದೆ ಅಧಿಕೃತ ಕೆಲಸಗಳಿಗೆ ವಿಶೇಷ ವಿಮಾನ ಮತ್ತು ಹೆಲಿಕಾಪ್ಟರ್ ವಾರ್ಷಿಕ ಗುತ್ತಿಗೆ ಪಡೆಯಲು ಮುಂದಾಗಿದೆ. ಇದನ್ನು ಬಿವೈ ವಿಜಯೇಂದ್ರ ಟೀಕಿಸಿದ್ದಾರೆ.
'ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ, ಹೊಸ ಹೊಸ ಯೋಜನೆ ರೂಪಿಸಲು ಹಣವಿಲ್ಲ, ಸಮಯಕ್ಕೆ ಸರಿಯಾಗಿ ಸರ್ಕಾರಿ ನೌಕರರ ಸಂಬಳಕೊಡಲಾಗುತ್ತಿಲ್ಲ, ಆಪತ್ಕಾಲದಲ್ಲಿ ಜೀವನ್ಮರಣದೊಂದಿಗೆ ಹೋರಾಡುವ ರೋಗಿಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಹಣವೂ ಸಕಾಲದಲ್ಲಿ ತಲುಪುತ್ತಿಲ್ಲ, ಕನಿಷ್ಠ ಸ್ವಾತಂತ್ರ್ಯ ಯೋಧರ ಪಿಂಚಣಿಯನ್ನೂ ಕೊಡಲಾಗುತ್ತಿಲ್ಲ, ಇಂತಹ ದಯನಿಯ ಆರ್ಥಿಕ ಸ್ಥಿತಿಯಲ್ಲಿರುವ ಕಾಂಗ್ರೆಸ್ ಸರ್ಕಾರ '5 ಸೀಟರ್ ನ ಹೆಲಿಕಾಪ್ಟರ್ ಹಾಗೂ 13 ಸೀಟರ್ ಜೆಟ್' ಖರೀದಿಸಲು ಹೊರಟಿರುವುದು ಅತ್ಯಂತ ವಿಪರ್ಯಾಸ. ಇದು "ಹೊಟ್ಟೆಗೆ ಇಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು" ಎಂಬ ಗಾದೆ ನೆನಪಿಸುವಂತಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೋಜಿನ ಕಾರ್ಯಕ್ರಮಗಳು, ಸ್ವಪ್ರತಿಷ್ಠೆ ಮೆರೆಯಲು ಸಮಾವೇಶಗಳನ್ನು ಆಯೋಜಿಸಿ ಪ್ರತಿಷ್ಠೆ ಮೆರೆಯಲು ಸರ್ಕಾರದ ಖಜಾನೆ ಖಾಲಿ ಮಾಡಿದೆ. ಜನರ ತೆರಿಗೆ ಹಣದಲ್ಲಿ ದುಂದು ವೆಚ್ಚ ಮಾಡಲು ತೆರಿಗೆ ಹಾಗೂ ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಸುತ್ತಲೇ ಇದೆ. ಜನ ಅಧಿಕಾರ ಕೊಡುವುದು ಜನಸೇವೆಗಾಗಿ ಎಂಬ ಸಿದ್ಧಾಂತದ ನೆನಪು ಕಾಂಗ್ರೆಸ್ಸಿಗರಿಗೆ ಎಂದೂ ಬರುವುದಿಲ್ಲ.
ರಾಜ್ಯ ಹಾಗೂ ಜನತೆಯ ಮುಂದೆ ಸಾಲು, ಸಾಲು ಸವಾಲುಗಳಿವೆ, ಜನರ ಸಂಕಷ್ಟ ವಿಪರೀತಕ್ಕೆ ಹೋಗುತ್ತಿದೆ, ಮೊದಲು ಜನರ ದುಃಖ-ದುಮ್ಮಾನಗಳಿಗೆ ಸ್ಪಂದಿಸಲಿ, ತುರ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಿ, ಸದ್ಯ ವೆಚ್ಚ ಉಳಿಸುವ ನೆಪದಲ್ಲಿ ಹೆಲಿಕಾಪ್ಟರ್ ಹಾಗೂ ವಿಮಾನಗಳನ್ನು ಖರೀದಿಸುವ ಪ್ರಕ್ರಿಯೆಯಿಂದ ಹಿಂದೆ ಸರಿಯಲಿ ಎಂದಿದ್ದಾರೆ.