ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಅರೆಬೆಂದ ಗ್ಯಾರಂಟಿಗಳನ್ನು ಜನರಿಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ. ಮುಖ್ಯಮಂತ್ರಿಗಳು ಬಡವರ ಮೇಲೆ ಪ್ರಹಾರ ಮಾಡುವುದನ್ನು ನಿಲ್ಲಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದರು.
ದೆಹಲಿಯಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಪ್ರಾಮಾಣಿಕರಾಗಿದ್ದರೆ ಗ್ಯಾರಂಟಿ ಈಡೇರಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಬಿಪಿಎಲ್ ಕಾರ್ಡ್ ವಿಷಯದಲ್ಲಿ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಕೆಲಸವನ್ನು ರಾಜ್ಯದ ಕಾಂಗ್ರೆಸ್ ಸರಕಾರ ಮಾಡುತ್ತಿದೆ. ಅನರ್ಹರ ಕಾರ್ಡ್ ಬದಲಿಸಲು ಆಕ್ಷೇಪವಿಲ್ಲ; ಆದರೆ, ರಾಜ್ಯ ಸರಕಾರವು ಸಮರ್ಪಕ ಮಾನದಂಡವೇ ಇಲ್ಲದೆ ಪ್ಯಾನ್ ಕಾರ್ಡ್, ಆದಾಯ ತೆರಿಗೆ ವಿಚಾರಗಳನ್ನು ಮುಂದಿಟ್ಟುಕೊಂಡು 10ರಿಂದ 20 ಲಕ್ಷ ಬಿಪಿಎಲ್ ಕಾರ್ಡ್‍ಗಳನ್ನು ವಜಾ ಮಾಡಿದೆ ಎಂದು ಟೀಕಿಸಿದರು.
ಬಿಪಿಎಲ್ ಕಾರ್ಡಿಗೆ ಕತ್ತರಿ ಹಾಕಿದರೆ, ಗೃಹಲಕ್ಷ್ಮಿ ಹಣ ಉಳಿತಾಯ ಉಳಿತಾಯ ಆಗುತ್ತದೆ. ಗೃಹಲಕ್ಷ್ಮಿ ಹಣ ಇವರಿಗೆ ಕೊಡಲು ಸಾಧ್ಯವಾಗುತ್ತಿಲ್ಲ. 5 ಕೆಜಿ ಅಕ್ಕಿಗೆ ಕೊಡುವ ಹಣವೂ ಉಳಿಯಲಿದೆ. ಸಾವಿರಾರು ಕೋಟಿ ರೂ. ಉಳಿತಾಯಕ್ಕಾಗಿ ಈ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಆಕ್ಷೇಪಿಸಿದರು. ಬಿಪಿಎಲ್ ಕಾರ್ಡ್ ರದ್ದು ಮಾಡಿ ವಂಚನೆ ಮಾಡುವ ಸರಕಾರ ಇದು. ಮನುಷ್ಯತ್ವ ಇರುವ ಸರಕಾರ ಬಡವರಿಗೆ ಬರೆ ಎಳೆಯಲು ಮುಂದಾಗುತ್ತಿರಲಿಲ್ಲ ಎಂದು ತಿಳಿಸಿದರು.
ಸಿದ್ದರಾಮಯ್ಯ ಆದಿಯಾಗಿ ಸಚಿವರು ಭ್ರಷ್ಟಾಚಾರದ ಮಾತನಾಡುತ್ತಾರೆ. ಈ ಸರಕಾರ ಬಂದ ಬಳಿಕ ವಾಲ್ಮೀಕಿ ನಿಗಮದ ಹಗರಣ ನಡೆದಿದೆ. ನೂರಾರು ಕೋಟಿ ಕೊಳ್ಳೆ ಹೊಡೆದು ಚುನಾವಣೆ ಎದುರಿಸಿದ್ದು, ಈಗಾಗಲೇ ತನಿಖೆ ಎದುರಿಸುತ್ತಿದ್ದಾರೆ. ಸಚಿವರು ರಾಜೀನಾಮೆ ಕೊಟ್ಟು ಜೈಲಿಗೆ ಹೋಗಿ ಬಂದಿದ್ದಾರೆ. 500- 600 ಕೋಟಿಯ ಲಿಕ್ಕರ್ ಹಗರಣ ಬೆಳಕಿಗೆ ಬರುತ್ತಿದೆ ಎಂದು ವಿವರಿಸಿದರು. ಸ್ವತಃ ಸಿಎಂ ಅವರೇ ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ. ಮೈಸೂರಿನ ಮುಡಾ ಹಗರಣ ಸಂಬಂಧ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡಿದ್ದೇವೆ. ಕಾಂಗ್ರೆಸ್ಸಿಗರಿಗೆ ಅನುಕೂಲ ಆಗುವಂತೆ ತನಿಖಾ ಸಮಿತಿ, ಆಯೋಗ ನೇಮಿಸಲಾಗುತ್ತಿದೆ ಎಂದು ಟೀಕಿಸಿದರು.
ಲೋಕಾಯುಕ್ತವನ್ನು ದುರುಪಯೋಗ ಮಾಡುತ್ತಿದ್ದಾರೆ ಎಂದು ಮುಡಾ ಹಗರಣದ ವಿಷಯಗಳನ್ನು ಮುಂದಿಟ್ಟರು. ಸಚಿವ ಬೈರತಿ ಸುರೇಶ್ ಹೆಲಿಕಾಪ್ಟರ್‍ನಲ್ಲಿ ಮೈಸೂರಿಗೆ ಹೋದದ್ದು, ಅಮಾನತಾಗಬೇಕಾದ ಅಧಿಕಾರಿಗಳ ವರ್ಗಾವಣೆ ಮಾಡಿದ್ದು, ವೆಂಕಟಾಚಲಪತಿ ಆಯೋಗದಿಂದ ತನಿಖೆ, ದಾಖಲಾತಿ ಭಸ್ಮ ಮಾಡಿದ್ದನ್ನು ವಿವರಿಸಿದರು. ಪ್ರಾಮಾಣಿಕ ತನಿಖೆ ನಡೆದಿಲ್ಲ ಎಂದು ಆಕ್ಷೇಪಿಸಿದರು.
ಅಧಿಕಾರ ದುರುಪಯೋಗ- ಕ್ಲೀನ್ ಚಿಟ್‍ಗೆ ಪ್ರಯತ್ನ
ಸಿಎಂ ಬಾಮೈದ, ಲೋಕಾಯುಕ್ತ ಅಧಿಕಾರಿಗಳನ್ನು ರಾತ್ರೋರಾತ್ರಿ ಭೇಟಿ ಮಾಡಿದ್ದಾರೆ. ಆರೋಪಿ ನಂ 1 ಸ್ಥಾನದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿಜವಾಗಿ ಪ್ರಾಮಾಣಿಕರೇ ಆಗಿದ್ದರೆ, ಸಿಎಂ ಸ್ಥಾನದ ಘನತೆ, ಗೌರವ ಉಳಿಸುವ ಕಾಳಜಿ ಕಿಂಚಿತ್ತಾದರೂ ಇದ್ದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿತ್ತು. ಅದನ್ನು ಬಿಟ್ಟು ಅಧಿಕಾರ ದುರುಪಯೋಗ ಪಡಿಸಿಕೊಂಡು ತನಿಖಾ ಸಂಸ್ಥೆಗಳ ಮೇಲೆ ಒತ್ತಡ ಹೇರಿ, ಅವರಿಗೆ ಬೇಕಾದಂತ ವರದಿ, ಕ್ಲೀನ್ ಚಿಟ್ ಪಡೆಯುವ ಪ್ರಯತ್ನವನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಡುತ್ತಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು. ಅತಿ ಶೀಘ್ರವೇ ಇವರಿಗೆ ಕ್ಲೀನ್ ಚಿಟ್ ಸಿಗಲಿದೆ ಎಂದರು.
ಭರವಸೆ ಈಡೇರಿಸಲು ಸಾಧ್ಯವಾಗದೆ, ಹಣ ಕ್ರೋಡೀಕರಣ ಮಾಡಲಾಗದೆ ಮುಖ್ಯಮಂತ್ರಿಗಳು ಅಸಹಾಯಕರಾಗಿದ್ದಾರೆ. ಭಾಗ್ಯಲಕ್ಷ್ಮಿ ಯೋಜನೆಗೆ ಕತ್ತರಿ ಹಾಕಿದ್ದಾರೆ. ಹಾಲಿನ ಪ್ರೋತ್ಸಾಹಧನ ಸುಮಾರು 1 ಸಾವಿರ ಕೋಟಿಗೂ ಹೆಚ್ಚು ಬಾಕಿ ಇದೆ. ಯಡಿಯೂರಪ್ಪ ಅವರು ನೀಡುತ್ತಿದ್ದ ಕಿಸಾನ್ ಸಮ್ಮಾನ್ ಯೋಜನೆಯ 4 ಸಾವಿರವನ್ನೂ ನಿಲ್ಲಿಸಿದ್ದಾರೆ ಎಂದು ದೂರಿದರು.
ಸಿದ್ದರಾಮಯ್ಯನವರ ಸರಕಾರಕ್ಕೆ ಬಡವರ ಬಗ್ಗೆ ಕಾಳಜಿ ಇಲ್ಲ; ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ. ತಮ್ಮ ಹುಳುಕು ಮುಚ್ಚಿ ಹಾಕಲು ಕೇಂದ್ರ ಸರಕಾರವನ್ನು ದೂರುತ್ತಾರೆ. ಎಲ್ಲ ವಿಚಾರದಲ್ಲೂ ಕೇಂದ್ರ ಸರಕಾರವನ್ನು ದೂರುತ್ತಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ನಬಾರ್ಡ್ ವಿಷಯದಲ್ಲಿ ಸಿದ್ದರಾಮಯ್ಯನವರ ಕಪಟ ನಾಟಕ
ನಬಾರ್ಡ್ ವಿಷಯದಲ್ಲಿ ಸಿದ್ದರಾಮಯ್ಯನವರು ಕಪಟ ನಾಟಕ ಮಾಡುತ್ತಿದ್ದಾರೆ. ಹಣಕಾಸಿನ ಸಚಿವರಾಗಿ ಕೇಂದ್ರ ಸರಕಾರದಿಂದ ಬರುವ ಹಣದ ಕುರಿತು ತಪ್ಪು ಮಾಹಿತಿ ಕೊಡುತ್ತಿದ್ದಾರೆ. ಬ್ಯಾಂಕ್‍ಗಳು ಶೇ 40ರಷ್ಟು ಮೊತ್ತವನ್ನು ಆದ್ಯತಾ ವಲಯವಾದ ಕೃಷಿ ಕ್ಷೇತ್ರಕ್ಕೆ ಕೊಡುತ್ತಿರುವುದು ಸಿದ್ದರಾಮಯ್ಯನವರಿಗೆ ತಿಳಿದಿಲ್ಲವೇ? ಹಿಂದೆಂದೂ ಈ ಪ್ರಮಾಣದಲ್ಲಿ ನೀಡುತ್ತಿರಲಿಲ್ಲ ಎಂದು ವಿವರಿಸಿದರು. ಶೇ 58 ಕಟ್ ಆಗಿದೆ ಎನ್ನುತ್ತಾರೆ. ಗುಜರಾತ್ ಸೇರಿ ಅನೇಕ ರಾಜ್ಯಗಳಿಗೂ ಹೀಗಾಗಿದೆ. ಎಲ್ಲ ಸತ್ಯ ಗೊತ್ತಿದ್ದರೂ ನಬಾರ್ಡಿನಿಂದ ಅನ್ಯಾಯ ಆಗುತ್ತಿದೆ ಎಂದು ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸವನ್ನು ರಾಜ್ಯದ ಮುಖ್ಯಮಂತ್ರಿಗಳು ಮಾಡುತ್ತಿದ್ದು, ಖಂಡಿತ ಸಿಎಂ ಸ್ಥಾನಕ್ಕೂ ಇದರಿಂದ ಗೌರವ ಬರುವುದಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ಶಾಸಕರು ದಂಗೆ ಏಳುವ ಪರಿಸ್ಥಿತಿ
ಬಿಜೆಪಿ, ಕಾಂಗ್ರೆಸ್ ಸರಕಾರ ಉರುಳಿಸಲು ಆಸಕ್ತಿ ಹೊಂದಿಲ್ಲ; ನಿಮ್ಮ ನಡವಳಿಕೆಯಿಂದ ಕಾಂಗ್ರೆಸ್ ಶಾಸಕರೇ ನಿಮ್ಮ ಪಕ್ಷದ ಸರಕಾರದ ವಿರುದ್ಧ ದಂಗೆ ಏಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು. ಅಭಿವೃದ್ಧಿ ಇಲ್ಲದ ಆಡಳಿತ ವೈಖರಿಯೇ ಇದಕ್ಕೆ ಕಾರಣ ಎಂದು ಟೀಕಿಸಿದರು.
ಆಡಳಿತ ಪಕ್ಷದ ಸಚಿವರು, ಶಾಸಕರಲ್ಲಿ ಮುಖ್ಯಮಂತ್ರಿಗಳ ಬಗ್ಗೆ ಭರವಸೆ ಕುಸಿದುಬಿದ್ದಿದೆ. ಶಾಸಕರ ಅಸಮಾಧಾನ ಭುಗಿಲೆದ್ದಿರುವ ಸಂದರ್ಭದಲ್ಲೇ ಗೃಹ ಸಚಿವ ಪರಮೇಶ್ವರ್ ಅವರಿಗೂ ಈ ಸರಕಾರ ಬಹಳ ದಿನ ಉಳಿಯುವುದಿಲ್ಲ ಎಂದು ಅನಿಸಿದೆ. ಅದನ್ನೇ ಮೈಸೂರಿನಲ್ಲಿ ನಿನ್ನೆ ಗೃಹ ಸಚಿವರು ವ್ಯಕ್ತಪಡಿಸಿದ್ದಾರೆ ಎಂದು ವಿಶ್ಲೇಷಿಸಿದರು.