Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯನವರ ಕುರ್ಚಿ ಅಲ್ಲಾಡಿದಾಗ ಸಾಧನಾ ಸಮಾವೇಶ: ವಿಜಯೇಂದ್ರ

BY Vijayendra

Krishnaveni K

ಕಲಬುರ್ಗಿ , ಶನಿವಾರ, 19 ಜುಲೈ 2025 (13:15 IST)
ಕಲಬುರ್ಗಿ: ಸಿದ್ದರಾಮಯ್ಯನವರ ಕುರ್ಚಿ ಯಾವಾಗ ಬಲ ಕಳಕೊಳ್ಳುತ್ತದೋ, ಮುಖ್ಯಮಂತ್ರಿ ಕುರ್ಚಿ ಅಲ್ಲಾಡುತ್ತಿದೆ ಅನಿಸಿದಾಗ, ಅಸ್ಥಿರತೆ ಕಾಡಿದಾಗಲೆಲ್ಲ ಸಮಾವೇಶಗಳನ್ನು ಅವರು ನಿರಂತರವಾಗಿ ಮಾಡುತ್ತ ಬಂದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.

ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೈಸೂರಿನ ಕಾಂಗ್ರೆಸ್ ಸಾಧನಾ ಸಮಾವೇಶ ಕುರಿತ ಪ್ರಶ್ನೆಗೆ ಉತ್ತರ ನೀಡಿದರು. ಸಿದ್ದರಾಮಯ್ಯನವರು ಎಂದರೆ ಸಮಾವೇಶ; ಸಮಾವೇಶ ಎಂದರೆ ಸಿದ್ದರಾಮಯ್ಯನವರು. ಸಿದ್ದರಾಮಯ್ಯನವರು ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ಅಹಿಂದ ಸಮುದಾಯಗಳನ್ನು ಮುಂದೆ ಇಡುತ್ತಾರೆ. ಆ ಸಮುದಾಯಗಳನ್ನು ಬಳಸಿಕೊಂಡು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇಂಥ ಸಮಾವೇಶ ಮಾಡಿ, ಕಾಂಗ್ರೆಸ್ ಪಕ್ಷದ ಹೈಕಮಾಂಡಿಗೆ ಬೆದರಿಕೆ ಒಡ್ಡುವ ಕುತಂತ್ರಗಳನ್ನು ಮಾಡುತ್ತಾರೆಯೇ ವಿನಾ ರಾಜ್ಯದ ಮುಖ್ಯಮಂತ್ರಿಯಾಗಿ ಅವರ ಎರಡೂವರೆ ವರ್ಷದ ಆಡಳಿತದಲ್ಲಿ ಸಾಧನೆ ಶೂನ್ಯ ಎಂದು ಟೀಕಿಸಿದರು.
 
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಸಾಧನೆ ಮಾಡಿದ್ದರೆ ರಾಜ್ಯದ ಉಸ್ತುವಾರಿ ಸುರ್ಜೇವಾಲಾ ಅವರು ಪದೇಪದೇ ಬೆಂಗಳೂರಿಗೆ ಬಂದು ಶಾಸಕರನ್ನು ಮಾತನಾಡಿಸುವ ಮತ್ತು ಅವರ ಅಸಮಾಧಾನ ಹೋಗಲಾಡಿಸುವ ಪ್ರಮೇಯ ಉದ್ಭವಿಸುತ್ತಿರಲಿಲ್ಲ. ಶಾಸಕರ ಅಸಮಾಧಾನ ಅರ್ಥ ಮಾಡಿಕೊಳ್ಳಲು ಮತ್ತು ಮುಖ್ಯಮಂತ್ರಿ ಬದಲಾವಣೆ ಮಾಡುವುದಾದರೆ ಯಾರನ್ನು ಮಾಡಬೇಕೆಂದು ಶಾಸಕರ ಅಂತರಾಳದಲ್ಲಿ ಏನಿದೆ ಎಂದು ತಿಳಿಯಲು ಸುರ್ಜೇವಾಲಾ ಅವರು ಪದೇಪದೇ ಬರುತ್ತಿದ್ದಾರೆ. ಸಿದ್ದರಾಮಯ್ಯನವರ ಮುಖ್ಯಮಂತ್ರಿ ಗಾದಿ ವಿಷಯದಲ್ಲಿ ಅನಿಶ್ಚಿತತೆ ಕಾಡುತ್ತಿರುವ ಕಾರಣ ಈ ರೀತಿ ಸಮಾವೇಶ ಮಾಡುವ ಮೂಲಕ ಹೈಕಮಾಂಡ್‍ಗೆ ಬೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿಶ್ಲೇಷಿಸಿದರು.
 
ಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟಿ, ಕುದುರೆ ವ್ಯಾಪಾರ
ಕಾಂಗ್ರೆಸ್ಸಿನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಭರ್ಜರಿಯಾಗಿ ಪೈಪೋಟಿ ನಡೆಯುತ್ತಿದೆ. ಕುದುರೆ ವ್ಯಾಪಾರವೂ ಆರಂಭವಾಗಿದೆ ಎಂದು ನುಡಿದರು. ಈ ಸರಕಾರ ಯಾವುದೇ ಸಾಧನೆ, ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ ಎಂದು ಆರೋಪಿಸಿದರು. ಶಾಸಕರ ಬಲಕ್ಕಾಗಿ ರೇಟ್ ಫಿಕ್ಸಿಂಗ್ ನಡೆಯುತ್ತಿದೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಸಿದ್ದರಾಮಯ್ಯನವರು ನಾನೇ 5 ವರ್ಷ ಸಿಎಂ ಎಂದು ದೆಹಲಿಯಲ್ಲಿ ಹೇಳುವ ಮೂಲಕ ಕಾಂಗ್ರೆಸ್ ಹೈಕಮಾಂಡಿಗೆ ನೇರವಾಗಿ ಸವಾಲನ್ನು ಹಾಕಿದ್ದಾರೆ ಎಂದು ತಿಳಿಸಿದರು.
ದೆಹಲಿಯಲ್ಲಿ ರಾಹುಲ್ ಗಾಂಧಿಯವರು ಸಿದ್ದರಾಮಯ್ಯನವರಿಗೆ ಭೇಟಿಗೆ ಅವಕಾಶವನ್ನೂ ನೀಡಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಇದು ಉದಾಹರಣೆ ಎಂದು ವಿವರಿಸಿದರು. ಕಾಂಗ್ರೆಸ್ ಶಾಸಕರು ಒಳಗೊಳಗೇ ಕತ್ತಿ ಮಸೆಯುತ್ತಿದ್ದಾರೆ. ಸಿದ್ದರಾಮಯ್ಯರ ಪರ ಕೆಲವರು, ಡಿಕೆಶಿ ಪರ ಇನ್ನೂ ಹಲವರು ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು.
 
ಸಣ್ಣ ವ್ಯಾಪಾರಿಗಳಿಗೆ ತೆರಿಗೆ ಪಾವತಿಗೆ ರಾಜ್ಯ ಸರಕಾರದ ನೋಟಿಸ್ ಕುರಿತಂತೆ ಪತ್ರಕರ್ತರು ಪ್ರಶ್ನಿಸಿದರು. ನಿನ್ನೆ ನಾವು ಪಕ್ಷದ ಮುಖಂಡರು ಚರ್ಚೆ ಮಾಡಿದ್ದೇವೆ. ಒಂದು ಕಡೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ಗ್ಯಾರಂಟಿಗಳಿಗೆ ಹಣ ಕ್ರೋಡೀಕರಿಸಲು ಸಾಧ್ಯವಾಗದೇ, ಇದನ್ನೇ ನೆಪ ಒಡ್ಡಿ ಬೀದಿ ವ್ಯಾಪಾರಿಗಳಿಗೆ ನೋಟಿಸ್ ನೀಡಿ ಹೆದರಿಸುವ ಕೆಲಸ ಮಾಡುತ್ತಿದೆ ಎಂದು ಆಕ್ಷೇಪಿಸಿದರು.
 
ಜಿಎಸ್‍ಟಿ, ಕೇಂದ್ರಕ್ಕೆ ಹೋಗುತ್ತದೆ ಎಂಬುದು ಎಷ್ಟು ಸತ್ಯವೋ, ದೇಶದ ಯಾವುದೇ ರಾಜ್ಯದಲ್ಲಿ ಇಂಥ ಬೆಳವಣಿಗೆ ಆಗಿಲ್ಲ; ಆದರೆ, ಕರ್ನಾಟಕದಲ್ಲಿ ಗ್ಯಾರಂಟಿಗಳಿಗೆ ಹಣ ಕ್ರೋಡೀಕರಿಸಲು ಸಾಧ್ಯವಾಗುತ್ತಿಲ್ಲ; ಅಭಿವೃದ್ಧಿಗೆ ಹಣ ಹೊಂದಿಸಲು ಸಾಧ್ಯವಾಗದೇ, ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಸಣ್ಣಸಣ್ಣ ವ್ಯಾಪಾರಿಗಳು, ಬೀದಿಬದಿ ವ್ಯಾಪಾರಿಗಳನ್ನು ಬೆದರಿಸುವ ಕೆಲಸ ರಾಜ್ಯ ಸರಕಾರದಿಂದ ಆಗುತ್ತಿದೆ ಎಂದು ದೂರಿದರು.
 
ರಾಜಕೀಯವಾಗಿ ಮುಗಿಸುವ ಷಡ್ಯಂತ್ರ
ರೌಡಿ ಶೀಟರ್ ಕೊಲೆ ಕೇಸಿನಲ್ಲಿ ಶಾಸಕ ಬೈರತಿ ಬಸವರಾಜು ಅವರ ಮೇಲೆ ಹೆಸರನ್ನು ಆರೋಪಿಯಾಗಿ ಸೇರಿಸಿದ ಕುರಿತ ಪ್ರಶ್ನೆಗೆ ಉತ್ತರ ನೀಡಿ, ಕಳೆದ 2 ವರ್ಷದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷವು ಬಿಜೆಪಿ ಶಾಸಕರನ್ನು ಬೆದರಿಸುವ ಕುತಂತ್ರಗಳನ್ನು ನಿರಂತರವಾಗಿ ನಡೆಸುತ್ತ ಬಂದಿದೆ. ದಕ್ಷಿಣ ಕನ್ನಡದಲ್ಲಿ ನಮ್ಮ ಶಾಸಕ ಹರೀಶ್ ಪೂಂಜಾ ಅವರ ಮೇಲೆ ಎಫ್‍ಐಆರ್ ನೋಂದಾವಣೆ ಮಾಡಿದ್ದರು. ಅವರನ್ನು ಬಂಧಿಸುವ ಪ್ರಯತ್ನ ಮಾಡಿದ್ದು, ಅದು ಸಫಲವಾಗಲಿಲ್ಲ. ನಂತರ ಭರತ್ ಶೆಟ್ಟಿಯವರ ಮೇಲೆ ಎಫ್‍ಐಆರ್ ದಾಖಲಿಸಿದ್ದರು. ವಿವಿಧ ಶಾಸಕರ ಮೇಲೆ ಎಫ್‍ಐಆರ್ ದಾಖಲಿಸಿ ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಈಗ ಹಿಂದುಳಿದ ವರ್ಗಗಳ ನಾಯಕ- ಮಾಜಿ ಸಚಿವ ಬೈರತಿ ಬಸವರಾಜು ಅವರನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರ ಇದರ ಹಿಂದಿದೆ ಎಂದು ವಿಜಯೇಂದ್ರ ತಿಳಿಸಿದರು. ಕೊಲೆಯಾದವನ ತಾಯಿ ಕೂಡ ತಾವು ಬೈರತಿ ಬಸವರಾಜು ಅವರ ಹೆಸರು ಹೇಳಿಲ್ಲ ಎಂದು ಉಲ್ಲೇಖಿಸಿದ್ದಾರೆ ಎಂದರು. 
 
ಮುಖ್ಯಮಂತ್ರಿಗಳ ಅನುದಾನದ ಕಪಟ ನಾಟಕ
ಶಾಸಕರಿಗೆ ಅನುದಾನದಲ್ಲಿ ತಾರತಮ್ಯ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿಗಳು ಕೃಪೆ ತೋರಿದ್ದಾರೆ ಎಂದು ವ್ಯಂಗ್ಯವಾಗಿ ತಿಳಿಸಿದರು. ಎರಡು ವರ್ಷ ಆಡಳಿತಾವಧಿ ಮುಗಿದರೂ ಅನುದಾನ ಸಿಗದ ಕುರಿತು ಅವರ ಪಕ್ಷದ ಶಾಸಕರೇ ಅಸಮಾಧಾನ ತೋಡಿಕೊಂಡಿದ್ದಾರೆ. ಮುಖ್ಯಮಂತ್ರಿಗಳು ಕುರ್ಚಿ ಉಳಿಸಿಕೊಳ್ಳಲು ಅನುದಾನದ ಕಪಟ ನಾಟಕ ಆಡುತ್ತಿದ್ದಾರೆ ಎಂದು ಟೀಕಿಸಿದರು. 50 ಕೋಟಿ ಬಿಡುಗಡೆಗೆ ಸಿಎಂ ಪತ್ರ ಬರೆದಿದ್ದಾರೆ. ಅಷ್ಟೇ ಬಿಡುಗಡೆ ಆಗಲಿದೆಯೇ? ಯಾವಾಗ ಬಿಡುಗಡೆ ಆಗಲಿದೆ? ಯಾವಾಗ ಶಾಸಕರ ಕೈ ಸೇರಲಿದೆ? ಅಭಿವೃದ್ಧಿ ಕೆಲಸ ಆಗುವುದು ಯಾವಾಗ- ಇವೆಲ್ಲವೂ ಯಕ್ಷಪ್ರಶ್ನೆ ಎಂದರು. ಕಾಂಗ್ರೆಸ್ ಆಡಳಿತದಲ್ಲಿ ಆಡಳಿತ ಪಕ್ಷದವರ ಕಣ್ಣಿಗೆ ಬೆಣ್ಣೆ, ವಿಪಕ್ಷದವರ ಕಣ್ಣಿಗೆ ಸುಣ್ಣ ಎಂಬುದು ನಿರಂತರವಾಗಿ ನಡೆಯುತ್ತ ಬಂದಿದೆ. ಈಗಲೂ ಅದನ್ನೇ ಮುಂದುವರೆಸಿದ್ದಾರೆ ಎಂದು ತಿಳಿಸಿದರು.
 
ಮಲ್ಲಿಕಾರ್ಜುನ ಖರ್ಗೆಯವರ ಹೆಸರು ಹೇಳಿದರೆ ಸಿದ್ದರಾಮಯ್ಯನವರಿಗೆ ಕೋಪ ಬರುತ್ತದೆ. ದಲಿತ ಮಲ್ಲಿಕಾರ್ಜುನ ಖರ್ಗೆಯವರಿಗೆ ನ್ಯಾಯ ಸಿಗಲಿ ಎಂಬ ಹಿನ್ನೆಲೆಯಲ್ಲಿ ಖರ್ಗೆಯವರಿಗೆ ಅವಕಾಶ ಕೊಡಲಿ ಎಂಬ ಮಾತನಾಡಿದ್ದೆ. ಪರಮೇಶ್ವರರಿಗೆ ಅನ್ಯಾಯ ಆದುದು ರಾಜ್ಯದಲ್ಲಿ ಚರ್ಚೆಯಾಗಿದೆ ಎಂದ ಅವರು, ನಾವು ಬುಡಕಟ್ಟು ಜನಾಂಗದ ಮಹಿಳೆ ದ್ರೌಪದಿ ಮುರ್ಮು ಅವರನ್ನು ಮಾನ್ಯ ರಾಷ್ಟ್ರಪತಿಗಳನ್ನಾಗಿ ಮಾಡಿದ್ದೇವೆ. ಬಿಜೆಪಿ, ಹಿಂದೆಯೂ ರಾಮನಾಥ ಕೋವಿಂದ್ ಅವರನ್ನು ಗೌರವಾನ್ವಿತ ರಾಷ್ಟ್ರಪತಿಗಳನ್ನಾಗಿ ಮಾಡಿದೆ. ಕಾಂಗ್ರೆಸ್ಸಿಗರು ಅಲ್ಪಸಂಖ್ಯಾತರ ಕುರಿತು ಭಾಷಣ ಬಿಗಿಯುತ್ತಾರೆ, ಆದರೆ, ಬಿಜೆಪಿಯು ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿಗಳನ್ನಾಗಿ ಮಾಡಿತ್ತು ಎಂದು ಗಮನ ಸೆಳೆದರು.
ಅಹಿಂದ ನಾಯಕ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯನವರು ಕಳೆದ ಎರಡೂವರೆ ವರ್ಷಗಳಲ್ಲಿ ಆ ಸಮಯದಾಯಗಳಿಗೆ ಅನ್ಯಾಯ ಮಾಡಿದ್ದಾರೆಯೇ ಹೊರತು, ಅಭಿವೃದ್ಧಿಪಡಿಸುವ ಹಾಗೂ ನ್ಯಾಯ ನೀಡುವ ಕೆಲಸ ಮಾಡಿಲ್ಲ ಎಂದು ಆಕ್ಷೇಪಿಸಿದರು. ಹಿಂದುಳಿದ ವರ್ಗದವರಾದ ಮೋದಿಜೀ ಅವರು ದೇಶದ ಎಲ್ಲ ವರ್ಗಗಳಿಗೆ ನ್ಯಾಯ ಕೊಡಿಸುವ ಕಾರ್ಯ ಮಾಡಿದ್ದಾರೆ ಎಂದು ವಿವರಿಸಿದರು.
 
 
 
 
 

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ, ಪಾಕಿಸ್ತಾನ ಕದನದಲ್ಲಿ 5 ಜೆಟ್ ಹೊಡೆದುರುಳಿಸಲಾಗಿತ್ತು: ಟ್ರಂಪ್ ಮತ್ತೆ ಕಿರಿಕ್