Publish Date: Sat, 18 Jul 2026 (15:03 IST)
Updated Date: Sat, 18 Jul 2026 (15:08 IST)
ಬೆಂಗಳೂರು ಜು.18: ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮಗಳಿಂದ ಆತಂಕಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳಬಾರದು, ಆತ್ಮಹತ್ಯೆ ಪರಿಹಾರವಲ್ಲ ಎಂಬ ಸಂದೇಶ ಸಾರಲು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ(ಕೆಪಿವೈಸಿಸಿ) ವತಿಯಿಂದ ಛಾತ್ರೋನ್ ಕಿ ಗೂಂಜ್ (ವಿದ್ಯಾರ್ಥಿಗಳ ಧ್ವನಿ) ಅಭಿಯಾನದ ಅಂಗವಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸಲಾಯಿತು.
ಕೆಪಿವೈಸಿಸಿ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ್ ಅವರ ನೇತೃತ್ವದಲ್ಲಿ ಶನಿವಾರ ನಗರದ ಭಾರತ್ ಜೋಡೋ ಸಭಾಂಗಣದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳ ಸಮ್ಮುಖದಲ್ಲಿ ದೇಶದ ವಿದ್ಯಾರ್ಥಿ ಸಮೂಹಕ್ಕೆ ನ್ಯಾಯ ದೊರಕುವವರೆಗೂ, ಸುಧಾರಿತ ಶಿಕ್ಷಣ ವ್ಯವಸ್ಥೆ ಸ್ಥಾಪನೆಯಾಗುವವರೆಗೂ ಹೋರಾಡುವುದಾಗಿ ನಿರ್ಣಯ ಕೈಗೊಳ್ಳುವ ಜೊತೆಗೆ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನೈತಿಕ ಹೊಣೆಗಾರಿಕೆ ಹೊತ್ತು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಲಾಯಿತು. ಅಲ್ಲದೆ, ಆತ್ಮಹತ್ಯೆ ಮಾಡಿಕೊಳ್ಳಬಾರದೆಂದು ಜಾಗೃತಿ ಮೂಡಿಸಲಾಯಿತು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಕರ್ನಾಟಕ ಮತ್ತು ತಮಿಳುನಾಡು ನೀಟ್ ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ರಾಜ್ಯಗಳಿಗೆ ಕೊಡಬೇಕು ಎಂದು ಒತ್ತಡ ಹೇರಿದ್ದವು. ಆದರೆ, ಕೇಂದ್ರ ಸರ್ಕಾರ ನೀಟ್ ಜಾರಿಗೊಳಿಸಿ ಪರೀಕ್ಷಾ ವ್ಯವಸ್ಥೆಯನ್ನು ಬುಡಮೇಲು ಮಾಡಿದೆ. ಅದನ್ನು ಸರಿಪಡಿಸಲು ಬಹಳ ವರ್ಷಗಳೇ ಬೇಕು. ನಿಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಲು ಯಾವ ಸರ್ಕಾರ ಬೇಕೇಂದು ನೀವೇ ನಿರ್ಧರಿಸಬೇಕು. ಶಿಕ್ಷಣ ಭವಿಷ್ಯದ ಹಾದಿ, ಶಿಕ್ಷಣದಿಂದ ಉಜ್ವಲ ಭವಿಷ್ಯ ಸಾಧ್ಯ. ಶಿಕ್ಷಣದಿಂದ ಪ್ರಭುತ್ವವನ್ನು ಪ್ರಶ್ನಿಸುವ ಧೈರ್ಯ ಬರುತ್ತದೆ. ಪ್ರಶ್ನಿಸುವುದರಿಂದಲೇ ಉಜ್ವಲ ಭವಿಷ್ಯ ರೂಪುಗೊಳ್ಳುತ್ತದೆ ಎಂದು ವಿದ್ಯಾರ್ಥಿಗಳಿಗೆ ಸೂಚಿಸಿದರು.
ರಾಜೀನಾಮೆ ನೀಡುವವರೆಗೂ ಹೋರಾಟ
''ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಒಂದೇ ಒಂದು ಪರೀಕ್ಷೆಯಲ್ಲೂ ಅಕ್ರಮ ಸಂಭವಿಸಲು ಬಿಡುವುದಿಲ್ಲ. ದೇಶದ ಯುವಕರ ಭವಿಷ್ಯ ಉಜ್ವಲವಾಗಿರಬೇಕು ಎಂಬುದು ನಮ್ಮ ಗುರಿಯಾಗಿದ್ದು, ಅದನ್ನು ಸಾಕಾರಗೊಳಿಸುತ್ತೇವೆ. ಪ್ರಶ್ನೆ ಪತ್ರಿಕೆ ಲೀಕ್ ಆಗುವುದು ಸರ್ಕಾರದ ವೈಫಲ್ಯ. ಆದರೆ, ಮರುಪರೀಕ್ಷೆಗಳಲ್ಲಿ ಆತ್ಮವಿಶ್ವಾಸದಿಂದ ಪಾಲ್ಗೊಳ್ಳಿ. ಏಕೆಂದರೆ, ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ,'' ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದ ಬಿ.ಕೆ.ಹರಿಪ್ರಸಾದ್ ಅವರು, ''ಶಿಕ್ಷಣ ಅಲ್ಲೋಲಕಲ್ಲೋಲವಾದರೆ ದೇಶದ ಭವಿಷ್ಯ ಸದೃಢವಾಗಿರುವುದಿಲ್ಲ. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ಹೋರಾಟ ಮಾಡಬೇಕು. ಲೋಕಸಭೆ, ರಾಜ್ಯಸಭೆ ಹಾಗೂ ರಾಜ್ಯದ ವಿಧಾನಸಭೆ, ವಿಧಾನಪರಿಷತ್ತಿನಲ್ಲೂ ಈ ಕುರಿತು ಹೋರಾಟ ಮಾಡಲಾಗುವುದು ಎಂದು ಭರವಸೆ ನೀಡಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಾಜ್ಯಸಭಾ ಸದಸ್ಯ ಮನ್ಸೂರ್ ಅಲಿ ಖಾನ್, ''ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಇದುವರೆಗೂ 20ರಿಂದ 25 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇಶದ ಜನ ಪ್ರತಿದಿನವೂ ಪ್ರಶ್ನಿಸುತ್ತಿದ್ದಾರೆ. ಆದರೆ, ನಮ್ಮ ಪ್ರಧಾನ ಮಂತ್ರಿಗಳು ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಯನ್ನೂ ನೀಡುತ್ತಿಲ್ಲ. ಇಂದು, ದೇಶದ ಶಿಕ್ಷಣ ವ್ಯವಸ್ಥೆ ಪಾರದರ್ಶಕ ರಹಿತವಾಗಿದ್ದು, ಅಕ್ರಮಗಳ ಜಾಲ ತಿಳಿದಿದ್ದರೂ ನಮ್ಮ ಕೇಂದ್ರ ಸರ್ಕಾರ ಜಾಣ ಮೌನ ವಹಿಸಿದೆ. ಅಕ್ರಮವಿಲ್ಲದೆ ಒಂದೇ ಒಂದು ಪರೀಕ್ಷೆ ನಡೆಸಲು ಸಾಧ್ಯವಿಲ್ಲದವರು, ವಿಕಸಿತ ಭಾರತದ ಕುರಿತು ಮಾತನಾಡುತ್ತಿದ್ದಾರೆ. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡದಿರುವುದು ಕೇಂದ್ರ ಸರ್ಕಾರಕ್ಕೆ ನಾಚಿಕೆಯ ವಿಷಯ ಎಂದು ಕಿಡಿಕಾರಿದರು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ