Publish Date: Mon, 06 Jul 2026 (16:02 IST)
Updated Date: Mon, 06 Jul 2026 (16:04 IST)
ಬೆಂಗಳೂರು: ಕರ್ನಾಟಕದಲ್ಲಿ ಮತದಾರರ ಮಾಹಿತಿ ಮ್ಯಾಪಿಂಗ್ ಮತ್ತು ಮತಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ಕುರಿತು ಆಡಳಿತಾರೂಢ ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳಾದ ಬಿಜೆಪಿ-ಜೆಡಿಎಸ್ ನಡುವಿನ ರಾಜಕೀಯ ಜಟಾಪಟಿ ತೀವ್ರಗೊಂಡಿದೆ. ಈ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್, "ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರನ್ನು ದಾಳವಾಗಿ ಬಳಸಿಕೊಂಡು ಹರಕೆ ಕುರಿ ಮಾಡುತ್ತಿದ್ದಾರೆ" ಎಂದು ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷಗಳ ದ್ವಂದ್ವ ನೀತಿ ಹಾಗೂ ರಾಜ್ಯದಲ್ಲಿ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಕೈಬಿಡಲು ನಡೆಯುತ್ತಿರುವ ಷಡ್ಯಂತ್ರದ ವಿರುದ್ಧ ಕಟುವಾದ ವಾಗ್ದಾಳಿ ನಡೆಸಿದರು.
'ಕುಮಾರಸ್ವಾಮಿ ಅವರನ್ನು ಬಿಜೆಪಿ ಹರಕೆ ಕುರಿ ಮಾಡುತ್ತಿದೆ'
ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ವಿರುದ್ಧ ಜಂಟಿಯಾಗಿ ದೂರು ನೀಡಿರುವ ಪ್ರಹ್ಲಾದ್ ಜೋಶಿ ಹಾಗೂ ಕುಮಾರಸ್ವಾಮಿ ಅವರ ನಡವಳಿಕೆಯನ್ನು ಬಿ.ಕೆ. ಹರಿಪ್ರಸಾದ್ ಪ್ರಶ್ನಿಸಿದ್ದಾರೆ. "ಹಿಂದೆ ಪ್ರಹ್ಲಾದ್ ಜೋಶಿ ಅವರ ಬಗ್ಗೆ ಕುಮಾರಸ್ವಾಮಿ ಅವರು ಏನು ಹೇಳಿದ್ದರು ಎಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ. ದೇಶಾದ್ಯಂತ ಶಿವಸೇನಾ, ಅಕಾಲಿ ದಳ, ಟಿಎಂಸಿ, ಜೆಡಿಯು ಸೇರಿದಂತೆ ಪ್ರಾದೇಶಿಕ ಪಕ್ಷಗಳನ್ನು ಒಡೆದು ಬೇಳೆ ಬೇಯಿಸಿಕೊಂಡಿರುವ ಇತಿಹಾಸ ಬಿಜೆಪಿಯದ್ದಾಗಿದೆ. ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ಅನ್ನು ನೇರವಾಗಿ ಎದುರಿಸಲು ಧೈರ್ಯವಿಲ್ಲದೆ, ಕುಮಾರಸ್ವಾಮಿ ಅವರ ಬೆಂಬಲ ಪಡೆದು ಅವರನ್ನು ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ" ಎಂದು ಲೇವಡಿ ಮಾಡಿದರು.
ಮತದಾನದ ಹಕ್ಕು ಕಿತ್ತುಕೊಳ್ಳುವ ಷಡ್ಯಂತ್ರ: SIR ಪ್ರಕ್ರಿಯೆಗೆ ಆಕ್ಷೇಪ
ಕರ್ನಾಟಕದಲ್ಲಿ ಸದ್ಯ ನಡೆಯುತ್ತಿರುವ ಮತದಾರರ ಮ್ಯಾಪಿಂಗ್ ಪ್ರಕ್ರಿಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಹರಿಪ್ರಸಾದ್, ರಾಜ್ಯದಲ್ಲಿ 5.65 ಲಕ್ಷ ಮತದಾರರ ಮ್ಯಾಪಿಂಗ್ ನೆಪದಲ್ಲಿ ಸುಮಾರು 50 ಲಕ್ಷ ಜನರನ್ನು ಮತಪಟ್ಟಿಯಿಂದ ಕೈಬಿಡಲು ಷಡ್ಯಂತ್ರ ರೂಪಿಸಲಾಗಿದೆ ಎಂದು ಆರೋಪಿಸಿದರು.
"ಪಶ್ಚಿಮ ಬಂಗಾಳದಲ್ಲಿ 91 ಲಕ್ಷ ಮತಗಳನ್ನು ಪರಿಶೀಲನೆಗೆ ಒಳಪಡಿಸಿ 27 ಲಕ್ಷ ಜನರ ಹೆಸರನ್ನು ಕೈಬಿಡಲಾಗಿದೆ. ಇದು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿದೆ. ನೇರವಾಗಿ ಜನರಿಂದ ಬಹುಮತ ಪಡೆಯಲು ಸಾಧ್ಯವಾಗದ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಇಂತಹ ಷಡ್ಯಂತ್ರಗಳ ಮೂಲಕ ಸಂವಿಧಾನ ಬುಡಮೇಲು ಮಾಡುತ್ತಿದ್ದಾರೆ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಮಸೀದಿಗಳಲ್ಲಿ ಗಣತಿ ನಮೂನೆ ಭರ್ತಿ: ಸ್ಪಷ್ಟೀಕರಣ
ರಾಮನಗರದ ಮಸೀದಿ ಹಾಗೂ ಕಾಂಗ್ರೆಸ್ ನಾಯಕರ ಮನೆಗಳಲ್ಲಿ ಗಣತಿ ನಮೂನೆ ತುಂಬಲಾಗುತ್ತಿದೆ ಎಂಬ ಕುಮಾರಸ್ವಾಮಿ ಅವರ ಆರೋಪಕ್ಕೆ ಸ್ಪಷ್ಟನೆ ನೀಡಿದ ಅವರು, "ಕೊಳಗೇರಿ ಪ್ರದೇಶಗಳು ಮತ್ತು ಬಡ ಬಡಾವಣೆಗಳಿಗೆ ಹೋಗಲು ಬಿಎಲ್‌ಒ ಗಳು ನಿರಾಕರಿಸಿದ ಹಿನ್ನೆಲೆಯಲ್ಲಿ, ಅನಕ್ಷರಸ್ಥರು ಮತ್ತು ಬಡವರಿಗೆ ಅನುಕೂಲವಾಗುವಂತೆ ಸಮುದಾಯ ಭವನ, ದೇವಸ್ಥಾನ ಹಾಗೂ ಮಸೀದಿಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಕಾನೂನುಬದ್ಧವಾಗಿಯೇ ಅರ್ಜಿ ತುಂಬಲಾಗುತ್ತಿದೆ. ಇದರಲ್ಲಿ ಯಾವುದೇ ಅಕ್ರಮವಿಲ್ಲ. ನಕಲಿ ಅಥವಾ ಮೃತಪಟ್ಟ ಮತದಾರರನ್ನು ಪಟ್ಟಿಯಿಂದ ತೆಗೆಯಲು ನಮ್ಮ ಅಭ್ಯಂತರವಿಲ್ಲ, ಆದರೆ ನೈಜ ಮತದಾರರ ಹಕ್ಕು ತಪ್ಪಬಾರದು" ಎಂದರು.
ಇದೇ ವೇಳೆ ಬಿಜೆಪಿಗೆ ಕೌಂಟರ್ ನೀಡಿದ ಅವರು, "ಬಿಜೆಪಿ ಪರವಾಗಿ ಆರ್‌ಎಸ್‌ಎಸ್‌ನವರು ಸತ್ತವರ ಹೆಸರಿನಲ್ಲಿ ನಕಲಿ ಮತ ಹಾಕಿರುವುದನ್ನು ನಾವು ಸಾಕಷ್ಟು ಬಾರಿ ನೋಡಿದ್ದೇವೆ. ಇದರಲ್ಲಿ ಬಿಜೆಪಿಯವರು ಡಾಕ್ಟರೇಟ್ ಮಾಡಿದ್ದಾರೆ" ಎಂದು ಟೀಕಿಸಿದರು.
ಮಹದಾಯಿ ಯೋಜನೆ: ಪ್ರಹ್ಲಾದ್ ಜೋಶಿಗೆ ಸವಾಲು
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ವಿರುದ್ಧ ಹರಿಹಾಯ್ದ ಹರಿಪ್ರಸಾದ್, "ಚುನಾವಣೆಗೂ ಮುನ್ನ ಮಹದಾಯಿ ಯೋಜನೆ ಜಾರಿಯಾಯಿತೆಂದು ಸಂಭ್ರಮಾಚರಣೆ ಮಾಡಿದ್ದ ಇವರು, ಇಂದಿಗೂ ಕೇಂದ್ರ ಪರಿಸರ ಇಲಾಖೆಯಿಂದ ಅನುಮತಿ ತರಲು ಸಾಧ್ಯವಾಗಿಲ್ಲ. ರಾಜ್ಯದ ಅಭಿವೃದ್ಧಿ ಅಥವಾ ಸಂಸ್ಕೃತಿ ಬಗ್ಗೆ ಇವರು ಸಂಸತ್ತಿನಲ್ಲಿ ಎಷ್ಟು ಮಾತನಾಡಿದ್ದಾರೆ ಮತ್ತು ಎಷ್ಟು ಅನುದಾನ ತಂದಿದ್ದಾರೆ ಎಂದು ಶ್ವೇತಪತ್ರ ಹೊರಡಿಸಲಿ" ಎಂದು ಸವಾಲು ಹಾಕಿದರು.
"ಈ ದೇಶದಲ್ಲಿ ನೆಲೆಸಿರುವವರೆಲ್ಲರೂ ಭಾರತೀಯರು ಎಂದು ಅವರದ್ದೇ ಪಕ್ಷದ ನಾಯಕ ನಿತಿನ್ ಗಡ್ಕರಿ ಹೇಳಿದ್ದಾರೆ. ಅವರನ್ನ ನೋಡಿಯಾದರೂ ಪ್ರಹ್ಲಾದ್ ಜೋಶಿ ಬುದ್ಧಿ ಕಲಿಯಲಿ. ತಮ್ಮ ಪಕ್ಷದ ಗೊಂದಲಗಳನ್ನು ಮುಚ್ಚಿಡಲು ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ನಿಲ್ಲಿಸಲಿ" ಎಂದು ಬಿ.ಕೆ. ಹರಿಪ್ರಸಾದ್ ಪತ್ರಿಕಾಗೋಷ್ಠಿಯಲ್ಲಿ ಗುಡುಗಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ