Publish Date: Sun, 05 Jul 2026 (17:29 IST)
Updated Date: Sun, 05 Jul 2026 (17:32 IST)
ಬೆಂಗಳೂರು: ಸಾಮೂಹಿಕವಾಗಿ ಎಸ್‍ಐಆರ್ ಮಾಡುತ್ತಿದ್ದು, ರಾಜ್ಯದ ಎಲ್ಲ ಸಚಿವರು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು, ನೀವು ಮತದಾರರ ಪಟ್ಟಿಗೆ ಹೆಸರು ಸೇರಿಸದೇ ಇದ್ದರೆ ನಿಮಗೆ ಯಾವ ಗ್ಯಾರಂಟಿಯನ್ನೂ ಕೊಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಸಂಸದ ಡಾ.ಸುಧಾಕರ್ ಅವರು ಟೀಕಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಎಲ್‍ಒಗಳನ್ನು ಸಾಮಾನ್ಯ ಜಾಗಕ್ಕೆ ಕರೆಸಿ ಚುನಾವಣಾ ಆಯುಕ್ತರು ಮತ್ತು ಆಯೋಗದ ನಿಯಮಗಳನ್ನು ಗಾಳಿಗೆ ತೂರಿ ಒಂದೇ ಧರ್ಮ, ಒಂದೇ ಸಮೂಹ ಇಲ್ಲವೇ ಕಾಂಗ್ರೆಸ್‍ಗೆ ಮತ ಹಾಕುವ ಜನರನ್ನು ಕರೆದುಕೊಂಡು ಬಂದು ಎಸ್‍ಐಆರ್ ಮಾಡಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಇದರಿಂದ ಜನಸಾಮಾನ್ಯರು, ಬಡವರು, ಬಲಹೀನ ವರ್ಗದವರು ಆತಂಕದಿಂದ ಬಿಎಲ್‍ಒಗಳು ಮನೆಗೆ ಬರುವುದನ್ನು ವಿಚಾರ ಮಾಡದೇ, ಆತುರದಿಂದ ಅವರನ್ನೇ ಹುಡುಕಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಖ್ಯ ಚುನಾವಣಾ ಆಯುಕ್ತರು ಇದರ ಬಗ್ಗೆ ವಿಶೇಷ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಬಿಎಲ್‍ಒಗಳು ಬೂತ್ ವ್ಯಾಪ್ತಿಯ ಪ್ರತಿ ಮನೆಗೆ 3 ಬಾರಿ ಭೇಟಿ ಕೊಡಬೇಕು ಎಂಬ ನಿಯಮವಿದೆ. ಈ ನಿಯಮ ಪಾಲಿಸದ ಬಿಎಲ್‍ಒಗಳ ವಿರುದ್ಧ ನಮ್ಮ ಪಕ್ಷದ ಬಿಎಲ್‍ಎಗಳು ದೂರು ಕೊಡಬೇಕು ಎಂದು ಮನವಿ ಮಾಡಿದರು. ಬಾಂಗ್ಲಾದ ನಿವಾಸಿಗಳು ಇಲ್ಲಿ ವಾಸದ ಕುರಿತು ಸುಳ್ಳು ದಾಖಲಾತಿಗಳನ್ನು ಕೊಟ್ಟು ಮತಪಟ್ಟಿಯಲ್ಲಿ ಸೇರಿಸಿಕೊಳ್ಳುವುದು ದೇಶದ ಪ್ರಜಾಪ್ರಭುತ್ವಕ್ಕೆ ದೊಡ್ಡ ಪೆಟ್ಟು ಕೊಟ್ಟಂತಾಗಲಿದೆ ಎಂದು ತಿಳಿಸಿದರು.
ಸರಿಯಾದ ಮತಪಟ್ಟಿ ಮಾಡಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಈ ದೇಶದ ಪ್ರಜಾಪ್ರಭುತ್ವ ಉಳಿಸಲು ಇದು ಮೊದಲನೇ ಹೆಜ್ಜೆ. ಇದರಲ್ಲಿ ಯಾರೂ ಎಡವದಿರಿ ಎಂದು ತಿಳಿಸಿದರು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ