ಬೆಂಗಳೂರು: ರಾಜ್ಯಾದ್ಯಂತ ವಕ್ಫ್ ಮಂಡಳಿ ನೋಟಿಸ್ ನೀಡುತ್ತಿರುವುದನ್ನು ವಿರೋಧಿಸಿ ಇಂದಿನಿಂದ ರಾಜ್ಯ ಬಿಜೆಪಿ ಘಟಕ ನಮ್ಮ ಭೂಮಿ ನಮ್ಮ ಹಕ್ಕು ಪ್ರತಿಭಟನೆ ನಡೆಸಲು ಮುಂದಾಗಿದೆ. ಆದರೆ ಈ ಹೋರಾಟಕ್ಕೆ ಒಗ್ಗಟ್ಟೇ ಇಲ್ಲವಾಗಿದೆ.
ರಾಜ್ಯ ಬಿಜೆಪಿ ಘಟಕ ಈಗ ಎರಡು ಮನೆಯಾಗಿದೆ. ಅದರಲ್ಲೂ ವಕ್ಫ್ ಹೋರಾಟ ವಿಚಾರವಾಗಿ ಎರಡು ಬಣಗಳಾಗಿ ಮಾರ್ಪಟ್ಟಿದೆ. ಒಂದಕ್ಕೆ ಬಿವೈ ವಿಜಯೇಂದ್ರ ನೇತೃತ್ವವಾಗಿದ್ದರೆ ಇನ್ನೊಂದಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ನಾಯಕರಾಗಿದ್ದಾರೆ. ಮೇಲ್ನೋಟಕ್ಕೆ ನಾವು ಒಗ್ಗಟ್ಟಾಗಿ ಹೋರಾಡಲಿದ್ದೇವೆ ಎಂದು ಬಿಜೆಪಿ ನಾಯಕರು ಹೇಳಿಕೊಳ್ಳುತ್ತಿದ್ದರೂ ಮತ್ತೆ ಬಹಿರಂಗ ಕೆಸರೆರಚಾಟಗಳ ಮೂಲಕ ತಮ್ಮ ಭಿನ್ನಾಭಿಪ್ರಾಯಗಳನ್ನು ಹೊರಹಾಕುತ್ತಿದ್ದಾರೆ.
ಕರ್ನಾಟಕದ ಬಡ, ರೈತರ, ಮಠ-ಮಂದಿರಗಳ ಅಕ್ರಮವಾಗಿ ವಕ್ಫ್ ಬೋರ್ಡ್ ಹೆಸರಿನಲ್ಲಿ ಕಬಳಿಕೆ ಮಾಡಲು ಷಡ್ಯಂತ್ರ ರೂಪಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ನಮ್ಮ ಭೂಮಿ ನಮ್ಮ ಹಕ್ಕು ಆಂದೋಲನವನ್ನು ಹಮ್ಮಿಕೊಂಡಿದ್ದೇವೆ ಎಂದು ರಾಜ್ಯ ಬಿಜೆಪಿ ಘಟಕ ಘೋಷಿಸಿದೆ.
ಈಗಾಗಲೇ ವಕ್ಫ್ ವಿಚಾರವನ್ನು ಬಿಜೆಪಿ ಸರ್ಕಾರದ ವಿರುದ್ಧ ಅಸ್ತ್ರವಾಗಿ ಬಳಕೆ ಮಾಡಿದೆ. ಮುಂದಿನ ಸಂಸತ್ ಅಧಿವೇಶನದಲ್ಲಿ ವಕ್ಫ್ ತಿದ್ದುಪಡಿ ಖಾಯಿದೆ ಮಂಡಿಸಲು ಮೋದಿ ಸರ್ಕಾರ ಹೆಜ್ಜೆಯಿಟ್ಟಿದ್ದು, ಅದಕ್ಕೆ ಮೊದಲು ವಕ್ಫ್ ಕುರಿತ ವಾಸ್ತವ ಸ್ಥಿತಿ ಅರಿತು ದೊಡ್ಡ ಮಟ್ಟದಲ್ಲಿ ಜನ ಬೆಂಬಲ ಪಡೆಯಲು ಬಿಜೆಪಿ ಈ ಆಂದೋಲನಕ್ಕೆ ಕೈ ಹಾಕಿದೆ.