Publish Date: Fri, 13 Feb 2026 (15:53 IST)
Updated Date: Fri, 13 Feb 2026 (15:56 IST)
ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಶಾಸಕ ಸುನಿಲ್ ಕುಮಾರ್ ಸಿವಿರುದ್ಧ ಬಿಜೆಪಿ ಶಾಸಕ ಸುನಿಲ್ ಕುಮಾರ್ ಹೊಸ ಬಾಂಬ್ ಅನ್ನು ಸಿಡಿಸಿದ್ದಾರೆ. ಸಿದ್ದರಾಮಯ್ಯ ವಿರುದ್ಧದ ಬಗೆಗಿನ ಗಂಭೀರ ಆರೋಪದ ಬಗ್ಗೆ ಸುನಿಲ್ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಶೇರ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಿಎಂ ಶಿಫಾರಸು ಪತ್ರ ಸಹಿತ ಸುನಿಲ್ ಕುಮಾರ್ ಆರೋಪ ಮಾಡಿದ್ದು, ಸಿಎಂ ಸಿದ್ದರಾಮಯ್ಯ ಅವರ ಹಳಿ ತಪ್ಪಿದ ಆಡಳಿತದ ಕ್ಲಾಸಿಕ್ ಉದಾಹರಣೆಯಾಗಿದೆ. ಮಂಡ್ಯ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯನ್ನು ಮೈಸೂರು ಗ್ರಾಮಾಂತರ ಜಿಲ್ಲೆ ಅಬಕಾರಿ ಡಿಸಿಯಾಗಿ ನಿಯೋಜಿಸುವಂತೆ ಖುದ್ದು ಮುಖ್ಯಮಂತ್ರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ನಿರ್ದೇಶನ ನೀಡಿದ್ದಾರೆ ಅಂತಾ ಗಂಭೀರ ಆರೋಪ ಮಾಡಿದ್ದಾರೆ.
ಈ ಸಂಬಂಧ ಪ್ರಶ್ನೆ ಮಾಡಿರುವ ಸುನೀಲ್ ಕುಮಾರ್ ಅವರು, ಇದು ಅಬಕಾರಿ ಹಾಗೂ ಆರೋಗ್ಯ ಇಲಾಖೆಯ ವೃಂದ ನಿಯಮಕ್ಕೆ ಸಂಪೂರ್ಣ ವಿರುದ್ಧವಾಗಿದೆ. ಸಿದ್ದರಾಮಯ್ಯನವರೂ ಇಂದ್ರೀಯ ವಶವಾಗಿ ಆಡಳಿತದ ಹದ ಕಳೆದುಕೊಂಡಿದ್ದಾರೆ ಎಂಬುದಕ್ಕೆ ಇದು ನಿದರ್ಶನವಾಗಿದೆ ಅಂತಾ ವಾಗ್ದಾಳಿ ನಡೆಸಿದ್ದಾರೆ. ಅಬಕಾರಿ ಇಲಾಖೆಯಲ್ಲಿ ನಡೆದಿರುವ 6,000 ಕೋಟಿ ರೂ.ಗೂ ಅಧಿಕ ಮೊತ್ತದ ಅವ್ಯವಹಾರ ಹಾಗೂ ಕಿಕ್ ಬ್ಯಾಕ್ ದಂಧೆಯ ಹಿಂದೆ ಇಂಥ ಅವೈಜ್ಞಾನಿಕ ಹಾಗೂ ನಿಯಮ ಬಾಹಿರ ವರ್ಗಾವಣೆಯ ಸೂಚನೆಗಳು ಕೆಲಸ ಮಾಡಿರುವ ಸಾಧ್ಯತೆಗಳು ದಟ್ಟವಾಗಿದೆ. ಮುಖ್ಯಮಂತ್ರಿಗಳೇ ಆಯಕಟ್ಟಿನ ಇಲಾಖೆಗೆ ಮಾತ್ರ ನೀವು ಈ ರೀತಿ ಎರವಲು ಸೇವೆಯ ಶಿಫಾರಸು ಮಾಡುತ್ತೀರಾ? ಅಥವಾ ನಿಮ್ಮಿಂದ ಮಾಡಿಸುತ್ತಾರಾ ಎಂದು ಪ್ರಶ್ನೆ ಮಾಡಿದ್ದಾರೆ.
ಆರೋಗ್ಯ ಇಲಾಖೆಯಲ್ಲಿ ವೈದ್ಯರು ಇಲ್ಲದೇ ಸಾರ್ವಜನಿಕರು ನರಳುತ್ತಿರುವಾಗ ಜಿಲ್ಲಾ ವೈದ್ಯಾಧಿಕಾರಿಯೊಬ್ಬನನ್ನು ಅಬಕಾರಿ ಇಲಾಖೆಗೆ ನಿಯೋಜನೆ ಮಾಡುವಂತೆ ನೀವೇ ನಿರ್ದೇಶನ ನೀಡುತ್ತೀರೆಂದರೆ ಅದೆಂತಹ ಒತ್ತಡ ಹಾಗೂ ವ್ಯಾಮೋಹ ನಿಮ್ಮನ್ನು ಕಾಡುತ್ತಿರಬಹುದು? ಅಥವಾ ಅಧಿಕಾರ ಹಸ್ತಾಂತರದ ಚಿಂತೆ ನಿಮ್ಮನ್ನು ಆವರಿಸಿದೆಯೋ ಎಂದು ವ್ಯಂಗ್ಯವಾಡಿದ್ದಾರೆ.