Publish Date: Mon, 10 Oct 2022 (19:28 IST)
Updated Date: Mon, 10 Oct 2022 (19:36 IST)
ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುಜರಾತ್ ವಿಧಾನಸಭಾ ಚುನಾವಣೆಯ ಪ್ರಚಾರವನ್ನು ಪ್ರಾರಂಭಿಸಿದ್ದಾರೆ. ಈ ವರ್ಷದ ಡಿಸೆಂಬರ್‌ನಲ್ಲಿ ಗುಜರಾತ್ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಗುಜರಾತ್‌ನಲ್ಲಿ ತಮ್ಮ ಆಮ್ ಆದ್ಮಿ ಪಕ್ಷದ ಪ್ರಚಾರದ ನಡುವೆಯೇ ಅರವಿಂದ್ ಕೇಜ್ರಿವಾಲ್ BJP ಬಗ್ಗೆ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ. ಗುಜರಾತ್‌ನಲ್ಲಿ BJPಯ ಬಹಳಷ್ಟು ಕಾರ್ಯಕರ್ತರು ಮತ್ತು ಮುಖಂಡರು ನನ್ನನ್ನು ರಹಸ್ಯವಾಗಿ ಭೇಟಿಯಾಗುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ತಮ್ಮ ಪಕ್ಷವು ಸೋಲಬೇಕೆಂದು ಆ BJP ಕಾರ್ಯಕರ್ತರು ಮತ್ತು ನಾಯಕರು ಆಮ್ ಆದ್ಮಿ ಪಕ್ಷಕ್ಕೆ ಗುಟ್ಟಾಗಿ ಸಹಾಯ ಮಾಡುತ್ತಿದ್ದಾರೆ ಎನ್ನುವ ಮೂಲಕ ಅರವಿಂದ್ ಕೇಜ್ರಿವಾಲ್ ಹೊಸ ಬಾಂಬ್ ಸಿಡಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ BJPಯ ಬದಲು ಆಮ್ ಆದ್ಮಿ ಪಕ್ಷಕ್ಕೆ ಸಹಾಯ ಮಾಡುವುದಾಗಿ ಅವರು ನನಗೆ ಹೇಳಿದ್ದಾರೆ. ಅಲ್ಲದೆ, ಆಮ್ ಆದ್ಮಿ ಪಕ್ಷಕ್ಕಾಗಿ ರಹಸ್ಯವಾಗಿ ಕೆಲಸ ಮಾಡಲು ಮತ್ತು ಗುಜರಾತ್‌ನಲ್ಲಿ ಆಡಳಿತ ಪಕ್ಷ BJPಯನ್ನು ಸೋಲಿಸಲು ಕೆಲಸ ಮಾಡಲು ಗುಜರಾತ್‌ನ ಎಲ್ಲಾ BJP ನಾಯಕರನ್ನು ಆಹ್ವಾನಿಸುತ್ತಿದ್ದೇನೆ ಎಂದು AAP ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಗುಜರಾತಿನ ಬುಡಕಟ್ಟು ಪ್ರಾಬಲ್ಯದ ವಲ್ಸಾದ್ ಜಿಲ್ಲೆಯಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್ ಈ ಹೇಳಿಕೆಗಳನ್ನು ನೀಡಿದ್ದಾರೆ.