Select Your Language

Notifications

webdunia
webdunia
webdunia
webdunia

Mangaluru Suhas Shetty: ಸುಹಾಸ್ ಶೆಟ್ಟಿ ಕುಟುಂಬ ಸಮೇತ ರಾಜ್ಯಪಾಲರ ಭೇಟಿಯಾದ ಬಿಜೆಪಿ

Karnataka BJP

Krishnaveni K

ಬೆಂಗಳೂರು , ಶುಕ್ರವಾರ, 9 ಮೇ 2025 (14:36 IST)
ಬೆಂಗಳೂರು: ಸುಹಾಸ್ ಹತ್ಯೆ ಪ್ರಕರಣದ ಎನ್‍ಐಎ ತನಿಖೆ ಆಗಬೇಕು; ಈ ವಿಷಯದಲ್ಲಿ ಮಾನ್ಯ ರಾಜ್ಯಪಾಲರು ರಾಜ್ಯ ಸರಕಾರಕ್ಕೆ ಆಗ್ರಹಿಸಿ ಆದೇಶ ಮಾಡಿಸಲು ವಿನಂತಿಸಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
 
ಗೌರವಾನ್ವಿತ ರಾಜ್ಯಪಾಲರ ಭೇಟಿ ಬಳಿಕ ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಸುಹಾಸ್ ಹತ್ಯೆ ವಿಷಯದಲ್ಲಿ ನಿಷ್ಪಕ್ಷಪಾತ ತನಿಖೆಯ ನಮ್ಮ ನಿರೀಕ್ಷೆ ಹುಸಿಯಾಗಿದೆ. ಆದ್ದರಿಂದ ನಮ್ಮೆಲ್ಲ ಜನಪ್ರತಿನಿಧಿಗಳು, ಸುಹಾಸ್ ಮನೆಯವರು, ಗೌರವಾನ್ವಿತ ರಾಜ್ಯಪಾಲರನ್ನು ಭೇಟಿ ಮಾಡಿದ್ದೇವೆ ಎಂದು ತಿಳಿಸಿದರು. ಪ್ರಕರಣದಲ್ಲಿ ವಿದೇಶಿ ಹಣದ ಹರಿವಿನ ಚರ್ಚೆ ನಡೆಯುತ್ತಿದೆ. ಪಿಎಫ್‍ಐ ನಂಟು ಕೂಡ ಕಾಣುತ್ತಿದೆ ಎಂದರು.

ಸುಹಾಸ್ ಹತ್ಯೆ ಸಂದರ್ಭದಲ್ಲಿ ಬಿಜೆಪಿ ವತಿಯಿಂದ ಮಂಗಳೂರು ಚಲೋ ಮಾಡಲು ತೀರ್ಮಾನ ಮಾಡಿದ್ದೆವು. ‘ಆಪರೇಷನ್ ಸಿಂಧೂರ್’ ಪ್ರಾರಂಭವಾದ ಸಂದರ್ಭದಲ್ಲಿ ಶಾಂತಿ ಕಾಪಾಡಲು ಮತ್ತು ದೇಶದ ಜೊತೆ ನಿಲ್ಲಬೇಕೆಂದು ಹಾಗೇ ಇದ್ದೆವು. ಆದರೆ, ಸುಹಾಸ್ ಹತ್ಯೆ ಆದ ನಂತರದಲ್ಲಿ ನಡೆಯುತ್ತಿರುವ ತನಿಖೆಯು ಅನುಮಾನಕ್ಕೆ ಆಸ್ಪದ ಮಾಡಿಕೊಟ್ಟಿದೆ ಎಂದು ಟೀಕಿಸಿದರು.

ಈಚೆಗೆ ಮಂಗಳೂರಿನಲ್ಲಿ ಕೊಲೆಯಾದ ಸುಹಾಸ್ ಶೆಟ್ಟಿ ಅವರ ತಾಯಿ, ತಂದೆ ಮತ್ತು ಮಾವನ ಜೊತೆ ಸೇರಿ ಬಿಜೆಪಿ ಶಾಸಕರು, ಪ್ರಮುಖರ ನಿಯೋಗವು ಇಂದು ಮಾನ್ಯ ರಾಜ್ಯಪಾಲರನ್ನು ಭೇಟಿ ಮಾಡಿದೆ ಎಂದು ವಿವರಿಸಿದರು. ಅನೇಕ ಕಾರುಗಳನ್ನು ಬಳಸಿದ್ದರೂ ಒಂದೆರಡು ಕಾರನ್ನಷ್ಟೇ ವಶಕ್ಕೆ ಪಡೆದಿದ್ದಾರೆ. ಕೇವಲ 10 ಜನರನ್ನಷ್ಟೇ ಬಂಧಿಸಿದ್ದಾರೆ. ಇನ್ನೂ 15- 20 ಜನರು ಇದರ ಹಿಂದಿರುವ ಮಾಹಿತಿ ಸಿಗುತ್ತಿದೆ. ಕೊಲೆಗಾರರಿಗೆ ರಕ್ಷಣೆ ಕೊಡುವ ಕೆಲಸ ಮಾಡಿದ್ದ ಮಹಿಳೆಯರನ್ನು ಬಂಧಿಸಿಲ್ಲ; ಹೊರದೇಶದಿಂದಲೂ ಹಣ ಬಂದ ಮಾಹಿತಿ ಸಿಗುತ್ತಿದೆ ಎಂದು ತಿಳಿಸಿದರು.

ಕೊಲೆಯಲ್ಲಿ ಭಾಗಿ ಆದವರಿಗೆ ಪಿಎಫ್‍ಐ ಜೊತೆ ಮಾಹಿತಿ ಇರುವ ವಿಷಯ ಹೊರಬರುತ್ತಿದೆ. ಇದರ ಜೊತೆಗೇ ಬೇರೆ ಇಬ್ಬರು, ಮೂವರು ಹಿಂದೂ ಕಾರ್ಯಕರ್ತರಿಗೆ ಸಹ ‘ಸುಹಾಸ್ ಅವರ ಮರ್ಡರ್ ಮಾಡಿದ್ದೇವೆ. ಮುಂದಿನ ಗುರಿ ನೀವು’ ಎಂಬ ಬೆದರಿಕೆಯನ್ನೂ ಹಾಕಲಾಗುತ್ತಿದೆ ಎಂದು ಗಮನ ಸೆಳೆದರು.
ಫಾಝಿಲ್ ಅವರ ಕುಟುಂಬದವರು ಇದರಲ್ಲಿ ಇಲ್ಲ ಎಂದು ಸ್ಪೀಕರ್ ಅವರ ಹೇಳಿಕೆಯು ಪರೋಕ್ಷವಾಗಿ ರಕ್ಷಣೆ ಕೊಡುವಂತಿದೆ. ಗೃಹ ಸಚಿವ ಪರಮೇಶ್ವರ್ ಅವರು, ತನಿಖೆ ಪ್ರಾರಂಭಕ್ಕೂ ಮೊದಲು ಎನ್‍ಐಎಗೆ ಕೊಡಲು ಸಾಧ್ಯ ಇಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ಈ ಹೇಳಿಕೆಗಳಿಂದ ಅಲ್ಲಿನ ಪೊಲೀಸರು ಯಾವ ರೀತಿ ಪ್ರಾಮಾಣಿಕವಾಗಿ ತನಿಖೆ ಮಾಡಲು ಸಾಧ್ಯವಿದೆ ಎಂದು ಪ್ರಶ್ನಿಸಿದರು. ಇನ್ನುಳಿದ ಹಿಂದೂ ಕಾರ್ಯಕರ್ತರಿಗೆ ಯಾವ ರೀತಿ ರಕ್ಷಣೆ ನಿರೀಕ್ಷಿಸಲು ಸಾಧ್ಯ ಎಂದು ಕೇಳಿದರು.
 
ಸ್ಥಳೀಯ ಕಾಂಗ್ರೆಸ್ ನಾಯಕರು ಆ ಕುಟುಂಬವನ್ನು ಮಾತನಾಡಿಸುವ ಕೆಲಸ ಮಾಡಿಲ್ಲ. ಮಂಗಳೂರಿಗೆ ಬಂದಿದ್ದ ಗೃಹ ಸಚಿವರು, ಅಲ್ಪಸಂಖ್ಯಾತ ಮುಖಂಡರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅವರು ಹೊರಕ್ಕೆ ಹೋಗಲೂ ಬಿಡುವುದಿಲ್ಲ; ಗೃಹ ಸಚಿವರನ್ನು ತಡೆಯುವ ಕೆಲಸವನ್ನೂ ಮಾಡಿದ್ದಾರೆ ಎಂದರು. ಸುಹಾಸ್ ಅವರ ಹತ್ಯೆಯಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿಲ್ಲ; ಆದರೆ, ಬೆದರಿಕೆ ಬಂದ ಉಳಿದ ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಕೊಡಬೇಕಿದೆ ಎಂದು ಆಗ್ರಹಿಸಿದರು.
 
ಪಾಕ್ ಪ್ರಜೆಗಳನ್ನು ವಾಪಸ್ ಕಳುಹಿಸಿ
ರಾಜ್ಯಗಳಲ್ಲಿರುವ ಪಾಕಿಸ್ತಾನದ ಪ್ರಜೆಗಳನ್ನು 48 ಗಂಟೆಗಳ ಒಳಗಾಗಿ ಅವರ ದೇಶಕ್ಕೆ ಕಳಿಸಬೇಕೆಂದು ಕೇಂದ್ರ ಸರಕಾರ ಸೂಚನೆ ನೀಡಿದೆ. ಆದರೆ, ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದರು.
ಬಿಜೆಪಿ, ರಾಜ್ಯದಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಿದೆ. 60 ಸಾವಿರಕ್ಕೂ ಹೆಚ್ಚು ಸಹಿ ಪಡೆದು ಇವತ್ತು ನಾವು ಜಿಲ್ಲಾಧಿಕಾರಿಗಳು, ಮಾನ್ಯ ರಾಜ್ಯಪಾಲರನ್ನೂ ಭೇಟಿ ಮಾಡಿದ್ದೇವೆ. ಇದು ರಾಷ್ಟ್ರದ ಭದ್ರತೆಯ ವಿಷಯ ಎಂದು ಗಮನ ಸೆಳೆದಿದ್ದೇವೆ. ರಾಜ್ಯದಲ್ಲಿರುವ ಪಾಕಿಸ್ತಾನದ ಪ್ರಜೆಗಳನ್ನು ಕೂಡಲೇ ವಾಪಸ್ ಕಳಿಸುವ ಕುರಿತು ರಾಜ್ಯ ಸರಕಾರಕ್ಕೆ ನಿರ್ದೇಶನ ಕೊಡುವಂತೆ ಮನವಿ ಮಾಡಿದ್ದೇವೆ ಎಂದರು.
 
 

Share this Story:

Follow Webdunia kannada

ಮುಂದಿನ ಸುದ್ದಿ

Arecanut price today: ಅಡಿಕೆ ಬೆಲೆ ಇಂದು ಎಷ್ಟಾಗಿದೆ ನೋಡಿ