ಬೆಂಗಳೂರು: ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಅನೇಕ ಕಾರ್ಯಕರ್ತರು, ಮುಖಂಡರು ಕಾಂಗ್ರೆಸ್ ಸೇರಲು ಉತ್ಸುಕರಾಗಿದ್ದಾರೆಂದು ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶುಕ್ರವಾರ ಹೇಳಿದ್ದಾರೆ.
ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಹಲವು ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರು, ಮುಖಂಡರು ಕಾಂಗ್ರೆಸ್ ಪಕ್ಷ ಸೇರಲು ಉತ್ಸುಕರಾಗಿದ್ದಾರೆ. ಈ ಬಗ್ಗೆ ಸ್ಥಳೀಯ ಕಾಂಗ್ರೆಸ್ ಮುಖಂಡರಿಗೆ ಹೇಳಿದ್ದು ಪಕ್ಷಕ್ಕೆ ಸೇರ್ಪಡೆಯನ್ನು ಮಾಡಲಿದ್ದಾರೆ ಎಂದರು.
ಇನ್ನು ದೇವೇಗೌಡರ ಕುಟುಂಬದವರು ರಾಜಕೀಯಕ್ಕೆ ಬರುತ್ತಿರುವುದು ಜೆಡಿಎಸ್ ಕಾರ್ಯಕರ್ತರಲ್ಲಿ ಆತಂಕವನ್ನು ಸೃಷ್ಟಿಸಿದೆ ಎಂದರು.
''ಸುಮಾರು 5-6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಹಣಾಹಣಿ ಇದ್ದು, ಈಗ ಅಲ್ಲಿ ಜೆಡಿಎಸ್ ಅಧಿಕಾರದಲ್ಲಿದೆ. ನಮ್ಮ ಕಾರ್ಯಕರ್ತರು ನಮ್ಮನ್ನು ಕೈ ಬಿಡುವುದಿಲ್ಲ. ಅವರು ನಮ್ಮ ಭವಿಷ್ಯದ ಬಗ್ಗೆ ಚಿಂತಿಸುತ್ತಾರೆ ಎಂದರು.
ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಕರ್ನಾಟಕದಲ್ಲಿ ಜಾರಿಗೆ ತರಲಾಗುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪಕ್ಷದ ಇತರ ನಾಯಕರೊಂದಿಗೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಮುಂಬರುವ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಮುನ್ನ ಪಕ್ಷದ ಮುಖಂಡರಿಂದ ಮಾಹಿತಿ ಪಡೆದ ಬಗ್ಗೆ ಉತ್ತರಿಸಿದ ಅವರು, ತಳಮಟ್ಟದಿಂದ ಅಭಿಪ್ರಾಯ ಮತ್ತು ಪ್ರತಿಕ್ರಿಯೆ ಸಂಗ್ರಹಿಸಿ ಪಕ್ಷದ ನಾಯಕತ್ವಕ್ಕೆ ಕಳುಹಿಸುವುದು ನಮ್ಮ ಜವಾಬ್ದಾರಿಯಾಗಿದೆ ಮತ್ತು ನಾವು ಅದನ್ನು ಮಾಡಿದ್ದೇವೆ ಎಂದರು.