ಮೋದಿಯವರು ರಾಜ್ಯಕ್ಕೆ ಬಂದು ಹೋಗಿದ್ದು ಜೆಡಿಎಸ್ ಗೆ ಲಾಭವಾಗಿದೆ. ಇದೇ ರೀತಿ ಇನ್ನೂ ಎರಡು ಸಲ ರಾಜ್ಯಕ್ಕೆ ಬಂದು ಹೋದರೆ ಜೆಡಿಎಸ್ ಗೆ ಒಳ್ಳೆಯದಾಗಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು, ದೇವೇಗೌಡರನ್ನು ಕೆಂಪೇಗೌಡರ ಪ್ರತಿಮೆ ಉದ್ಘಾಟನೆಗೆ ಕರೆಯದೇ ಇದ್ದದ್ದು ಕನ್ನಡಿಗರಿಗೆ ಮಾಡಿದ ಅವಮಾನ. ಸಿದ್ದರಾಮಯ್ಯರನ್ನ ಸಹ ಕಾರ್ಯಕ್ರಮಕ್ಕೆ ಕರೆಯಬೇಕಿತ್ತು. ಪ್ರಧಾನಿ ನಾಡು ಕಟ್ಟಲು ರಾಜ್ಯಕ್ಕೆ ಬಂದಿಲ್ಲ, ಬಿಜೆಪಿ ಕಟ್ಟಲು ಬಂದಿದ್ದಾರೆ ಎಂದು ಲೇವಡಿ ಮಾಡಿದ್ರು. ನಿನ್ನೆ ನಡೆದ ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ನಿರ್ಮಲಾನಂದ ಸ್ವಾಮೀಜಿ ಹೆಗಲ ಮೇಲೆ ಕೈಹಾಕಿ ಸಚಿವ ಅಶೋಕ್ ಘೋರ ಅಪಮಾನ ಮಾಡಿದ್ದಾರೆ. ಈ ಹಿಂದೆ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಕೂಡ ಸ್ವಾಮೀಜಿ ಮುಂದೆ ಕಾಲು ಮೇಲೆ ಕಾಲು ಹಾಕಿ ಕುಳಿತಿದ್ದರು. ಬಿಜೆಪಿಯವರಿಗೆ ಅಧಿಕಾರದ ಮದ ನೆತ್ತಿಗೆ ಹತ್ತಿದೆ. ಯಾರಿಗೆ ಯಾವ ರೀತಿ ಗೌರವ ಕೊಡಬೇಕು ಅನ್ನೋದನ್ನ ಬಿಜೆಪಿಯವರು ಮರೆತಿದ್ದಾರೆ ಎಂದು ಕಿಡಿಕಾರಿದ್ರು. ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರೋದು ಶತಸಿದ್ದ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.