Publish Date: Mon, 29 Dec 2025 (10:03 IST)
Updated Date: Mon, 29 Dec 2025 (10:06 IST)
ಬೆಂಗಳೂರು: ಕನ್ನಡಿಗರ ಸ್ವಾಭಿಮಾನವನ್ನು ಕೇರಳ ಸರ್ಕಾರ ಮತ್ತು ಕಾಂಗ್ರೆಸ್ ಹೈಕಮಾಂಡ್ ಮುಂದೆ ಅಡವಿಟ್ರು ಎಂದು ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಕೋಗಿಲು ಲೇಔಟ್ ನಲ್ಲಿ ಸರ್ಕಾರೀ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಮುಸ್ಲಿಮರ ವಸತಿಗಳನ್ನು ಬುಲ್ಡೋಜರ್ ಬಳಸಿ ನೆಲಸಮ ಮಾಡಲಾಗಿತ್ತು. ಈ ವಿಚಾರವನ್ನು ಕೆದಕಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್ ಕರ್ನಾಟಕ ಸರ್ಕಾರದ ವಿರುದ್ಧ ಕಿಡಿ ಕಾರಿದ್ದರು. ಅಷ್ಟೇ ಅಲ್ಲ, ಕೋಗಿಲು ಲೇಔಟ್ ಗೆ ಕೇರಳದ ಶಾಸಕರು, ಸಂಸದರು ಬಂದು ಮೂಗು ತೂರಿಸಿದ್ದರು.
ಈ ವಿಚಾರ ಕಾಂಗ್ರೆಸ್ ಹೈಕಮಾಂಡ್ ಗೆ ತಲುಪಿತ್ತು. ಕೇರಳ ಮೂಲದವರೇ ಆದ ಎಐಸಿಸಿ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ಖುದ್ದಾಗಿ ಸಿಎಂ, ಡಿಸಿಎಂಗೆ ಕರೆ ಮಾಡಿ ಈ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದರು. ಅದರ ಬೆನ್ನಲ್ಲೇ ರಾಜ್ಯ ಸರ್ಕಾರ ಇಲ್ಲಿ ಮನೆ ಕಳೆದುಕೊಂಡವರಿಗೆ ಬೇರೆ ಕಡೆ ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಲಾಗಿದೆ. ಇವರೆಲ್ಲಾ ವಲಸೆ ಕಾರ್ಮಿಕರು ಎಂದು ಸ್ವತಃ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಆದರೆ ವಲಸೆ ಕಾರ್ಮಿಕರು ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದನ್ನು ತೆರವುಗೊಳಿಸಿದರೆ ತಪ್ಪೇನು? ಇದಕ್ಕೆ ಯಾಕೆ ಕನ್ನಡಿಗರ ತೆರಿಗೆ ಹಣದಿಂದ ಬೇರೆ ಕಡೆ ಯಾಕೆ ಮನೆ ಕಟ್ಟಿಸಿಕೊಡಬೇಕು? ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.
ರಾಜ್ಯ ಬಿಜೆಪಿ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಇದೇ ಆರೋಪ ಮಾಡಿದ್ದು, ಕೇರಳ ಸರ್ಕಾರ ಮತ್ತು ಕಾಂಗ್ರೆಸ್ ಹೈಕಮಾಂಡ್ ಲಾಬಿಗೆ ರಾಜ್ಯ ಸರ್ಕಾರ ಕನ್ನಡಿಗರ ಸ್ವಾಭಿಮಾನವನ್ನೇ ಅಡವು ಇಟ್ಟಿದೆ. ಒಂದು ವೇಳೆ ಹೈಕಮಾಂಡ್ ಹೇಳಿದ್ದಕ್ಕೆ ಅವರಿಗೆ ಬೇರೆ ಮನೆ ಕಟ್ಟಿಸಿಕೊಡಬೇಕು ಎಂದರೆ ಕಾಂಗ್ರೆಸ್ ನ ದುಡ್ಡಿನಿಂದ ಮಾಡಲಿ, ರಾಜ್ಯದ ತೆರಿಗೆ ಹಣ ಯಾಕೆ ಪೋಲು ಮಾಡಬೇಕು ಎಂದು ಟೀಕಿಸಿದೆ.