Publish Date: Wed, 24 Dec 2025 (09:46 IST)
Updated Date: Wed, 24 Dec 2025 (09:48 IST)
ಬೆಂಗಳೂರು: ಕೆಆರ್ ಪುರಂ ಶಾಸಕ ಬೈರತಿ ಬಸವರಾಜು ಅವರನ್ನು ಯಾವುದೇ ಕ್ಷಣದಲ್ಲೂ ಪೊಲೀಸರು ಬಂಧಿಸುವ ಸಾಧ್ಯತೆಯಿದೆ. ಬಿಕ್ಲು ಶಿವು ಮರ್ಡರ್ ಕೇಸ್ ನಲ್ಲಿ ಬೈರತಿ ಬಸವರಾಜುಗಾಗಿ ಸಿಐಡಿ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ.
ಮರ್ಡರ್ ಕೇಸ್ ನಲ್ಲಿ ಬೈರತಿ ಬಸವರಾಜು ಹೆಸರೂ ಕೇಳಿಬಂದಿದೆ. ಈ ಹಿನ್ನಲೆಯಲ್ಲಿ ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಇದನ್ನು ಮೊನ್ನೆಯಷ್ಟೇ ನ್ಯಾಯಾಲಯ ತಿರಸ್ಕರಿಸಿತ್ತು. ಇದರ ಬೆನ್ನಲ್ಲೇ ಶಾಸಕರು ತಲೆಮರೆಸಿಕೊಂಡಿದ್ದರು.
ಕೆಲವು ಮೂಲಗಳ ಪ್ರಕಾರ ಮಹಾರಾಷ್ಟ್ರಕ್ಕೆ ತೆರಳಿದ್ದಾರೆ ಎನ್ನಲಾಗುತ್ತಿದೆ. ಇದರ ಬೆನ್ನಲ್ಲೇ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದು, ಅವರ ಬಂಧನಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಮೊದಲು ಅವರನ್ನು ಬಂಧಿಸಿ ನಂತರ ಮುಂದಿನ ಕ್ರಮ ಕೈಗೊಳ್ಳಲು ಪೊಲೀಸರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಆದರೆ ಶಾಸಕರು ಈಗ ಯಾರ ಕೈಗೂ ಸಿಗುತ್ತಿಲ್ಲ. ಮೊಬೈಲ್ ಕೂಡಾ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಆದರೆ ಪ್ರಕರಣ ನಡೆದು 5 ತಿಂಗಳು ಕಳೆದ ಬಳಿಕ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಅನುಮಾನದ ಮೇರೆಗೆ ಬೈರತಿ ಬಸವರಾಜು ಹೆಸರನ್ನು ಎ5 ಎಂದು ಉಲ್ಲೇಖಿಸಲಾಗಿದೆ. ಸಿಐಡಿಗೆ ಕೇಸ್ ವರ್ಗಾವಣೆ ಆದ ನಂತರ ಇದುವರೆಗೆ ವಿಚಾರಣೆಗೆ ನೋಟಿಸ್ ಕೊಟ್ಟಿರಲಿಲ್ಲ ಎಂಬುದು ಬೈರತಿ ಪರ ವಕೀಲರ ವಾದವಾಗಿದೆ.