ಕಾರವಾರ: ಕಳೆದ 70 ಗಂಟೆಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದಾದ್ಯಂತ ಬೀದಿ ನಾಯಿಗಳ ದಾಳಿಯಿಂದ 15ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ನಡೆದಿದೆ. ಇದುವರೆಗೆ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಆರೋಗ್ಯ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಸಂತ್ರಸ್ತರಲ್ಲಿ ಹೆಚ್ಚಿನವರು ಮಕ್ಕಳು ಮತ್ತು ವೃದ್ಧರಾಗಿದ್ದು, ವಸತಿ ಪ್ರದೇಶಗಳು ಅಥವಾ ಮಾರುಕಟ್ಟೆಗಳಲ್ಲಿ ನಡೆದು ಹೋಗುವಾಗ ನಾಯಿ ದಾಳಿ ನಡೆಸಿದೆ.
ಜುಲೈ 6 ರಂದು ನಾಯಿ ದಾಳಿ ಪ್ರಾರಂಭವಾಗಿದ್ದು, ಅಂದಿನಿಂದ ದಾಳಿಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದ್ದು, ಹಲವರಿಗೆ ರೇಬೀಸ್ ವಿರೋಧಿ ಲಸಿಕೆಗಳನ್ನು ನೀಡಲಾಗಿದೆ.
ನಾಯಿಗಳ ದಾಳಿಗೆ ನಿವಾಸಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಅವರು ಪುರಸಭೆಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಬೀದಿ ನಾಯಿಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಈ ಹಿಂದೆ ದೂರುಗಳನ್ನು ನೀಡಿದಾಗ ನಾಗರಿಕ ಸಂಸ್ಥೆಗಳು ನಿರ್ಲಕ್ಷಿಸಿದ್ದವು ಎಂದು ಹಲವರು ಆರೋಪಿಸಿದ್ದಾರೆ.