ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆಯು ಇಂದಿಗೆ 1,000 ಕಿಲೋಮೀಟರ್‌ಗಳನ್ನು ಕ್ರಮಿಸುವ ಮೂಲಕ ಮೈಲಿಗಲ್ಲನ್ನು ತಲುಪಿದೆ. ಪಾದಯಾತ್ರೆ ಬಳ್ಳಾರಿ ತಲುಪುವ ಮೂಲಕ 1000 ಕಿಮೀ ಕ್ರಮಿಸಿದೆ. 3,500 ಕಿಲೋಮೀಟರ್ ನಡೆಯಲಿರುವ ಯಾತ್ರೆಯು ಕಾಂಗ್ರೆಸ್ ಪಕ್ಷ ಮತ್ತು ಇಡೀ ದೇಶಕ್ಕೆ ಐತಿಹಾಸಿಕ ಘಟನೆಯಾಗಿದೆ. ಬಳ್ಳಾರಿಯಲ್ಲಿ ಕಾಂಗ್ರೆಸ್ ಪಕ್ಷ ಬೃಹತ್ ಸಮಾವೇಶ ಆಯೋಜಿಸಿದ್ದೆ. ಇದೊಂದು ರಾಜಕೀಯೇತರ ಯಾತ್ರೆ ಎಂದು ಹೇಳಿದ್ದರು. ಆದರೂ ರಾಜಕೀಯದಲ್ಲಿ ಯಾರೂ ಸಂತರಲ್ಲ, ಈ ಯಾತ್ರೆಯಿಂದ ಕಾಂಗ್ರೆಸ್ ಗೆ ಸಂಪೂರ್ಣ ಲಾಭ ಸಿಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3,570 ಕಿಲೋಮೀಟರ್‌ಗಳ ಪಾದಯಾತ್ರೆಯು ಕಾಂಗ್ರೆಸ್ ನಾಯಕರ ನಡುವಿನ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿ ಮತ್ತು ದೊಡ್ಡ ಮಟ್ಟದಲ್ಲಿ ಜನರನ್ನು ಸೆಳೆಯುವ ಮೂಲಕ ಪಕ್ಷಕ್ಕೆ ಶಕ್ತಿ ತುಂಬಿದೆ.
2024 ರ ಲೋಕಸಭೆ ಮತ್ತು 2023 ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಪಕ್ಷದ ನೆಲೆಯನ್ನು ಬಲಪಡಿಸುವ ಪ್ರಯತ್ನವಾಗಿ ಅನೇಕ ಕಾಂಗ್ರೆಸ್ ನಾಯಕರು ಯಾತ್ರೆಯ ಮೇಲೆ ವಿಶ್ವಾಸವಿರಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಯಾತ್ರೆ ಸರಿಯಾದ ಸಮಯದಲ್ಲಿ ಬಂದಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.