ಬೆಳಗಾವಿ: ನಾಳೆಯಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದ್ದು, ಈ ಹಿನ್ನೆಲೆ ಬೆಳಗಾವಿ ಸುವರ್ಣಸೌಧದ ಸುತ್ತಾ ಬಿಗಿ ಬಂದೋಬಸ್ತ್‌ನ್ನು ಕೈಗೊಳ್ಳಲಾಗಿದೆ.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಶಾಸಕರು ಸೇರಿದಂತೆ ಸಚಿವಾಲಯದ ಅಧಿಕಾರಿಗಳು, ಸಿಬ್ಬಂದಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ.
ಇನ್ನೂ ಜಿಲ್ಲಾಡಳಿತದಿಂದ ಈಗಾಗಲೇ 3 ಸಾವಿರ ರೂಮ್ ಬುಕ್ ಆಗಿದ್ದು, ಸಿಎಂ ಮತ್ತು ಡಿಸಿಎಂಗೆ ಅತಿಥಿ ಗೃಹದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಬೆಳಗಾವಿ ನಗರದಲ್ಲಿ ಹೆಚ್ಚುವರಿ ಭದ್ರತೆ ನಿಯೋಜನೆ ಮಾಡಲಾಗಿದೆ. ದೆಹಲಿ ಕೆಂಪು ಕೋಟೆ ಬಳಿ ಕಾರು ಸ್ಫೋಟ ಪ್ರಕರಣ ಬಳಿಕ ಎಚ್ಚೆತ್ತುಕೊಳ್ಳಲಾಗಿದ್ದು, ಅಧಿವೇಶನದ ವೇಳೆ ನಿಗಾ ವಹಿಸುವಂತೆ ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿರುವ ಕಾರಣ ಬೆಳಗಾವಿ ಸುವರ್ಣಸೌಧದ ಸುತ್ತಮುತ್ತ ಹೈಅಲರ್ಟ್ ಘೋಷಣೆ ಮಾಡಲಾಗಿದೆ.
ಈ ಹಿನ್ನೆಲೆ ಬೆಳಗಾವಿ ನಗರದಲ್ಲಿ ಹೆಚ್ಚುವರಿಯಾಗಿ 6 ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದೆ. ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ನೇತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿದೆ. 6 ಎಸ್ಪಿ ದರ್ಜೆಯ ಪೊಲೀಸ್ ಅಧಿಕಾರಿಗಳು, 146 ಹಿರಿಯ ಪೊಲೀಸ್ ಅಧಿಕಾರಿಗಳು, 3,820 ಪೊಲೀಸ್ ಸಿಬ್ಬಂದಿ, 500 ಹೋಂ ಗಾರ್ಡ್ಸ್, 8 ಕ್ಷಿಪ್ರ ಕಾರ್ಯಪಡೆ, 10 ಡಿಎಆರ್ ತುಕಡಿ, 35 ಕೆಎಸ್‌ಆರ್‌ಪಿ ತುಕಡಿ, 1 ಬಿಡಿಡಿಎಸ್ ತಂಡ, 1 ಗರುಡಾ ಫೋರ್ಸ್, 16 ವಿಧ್ವಂಸಕ ಕೃತ್ಯ ತಪಾಸಣೆ ತಂಡಗಳು ಭದ್ರತೆಗಾಗಿ ನಿಯೋಜನೆಗೊಂಡಿವೆ.