ನಗರ ಪ್ರದೇಶದಲ್ಲಿ ಪದೇ ಪದೇ ಕಸದ ಲಾರಿಗಳು ಮಾಡುತ್ತಿರುವ ಅಪಘಾತಗಳಿಂದ ಮುಜುಗರಕ್ಕೀಡಾದ ಬಿಬಿಎಂಪಿ ಇದೀಗ ಸಮಸ್ಯೆಯಿಂದ ಪಾರಾಗಲು ಹೊಸ ತಂತ್ರ ರೂಪಿಸಿದೆ. ಕಸದ ವಾಹನಗಳಿಗೆ ಹೊಸ ನಿಯಮವನ್ನು ಜಾರಿಗೆ ತಂದಿದೆ. ಇನ್ಮುಂದೆ ಪಾಲಿಕೆ ವ್ಯಾಪ್ತಿಯ ಕಸದ ವಾಹನಗಳ ಮೇಲೆ ಬಿಬಿಎಂಪಿ ನಾಮಫಲಕ ಹಾಕುವಂತಿಲ್ಲ. ಗುತ್ತಿಗೆದಾರರ ಮೂಲಕ ಸರಬರಾಜು ಮಾಡಲಾದ ಎಲ್ಲ ವಾಹನಗಳಿಗೂ ಆದೇಶ ಅನ್ವಯವಾಗಲಿದೆ. ಒಂದೊಮ್ಮೆ ಸದರಿ ಕಸದ ವಾಹನಗಳಿಂದ ಅಪಘಾತ ಸಂಭವಿಸಿ ಸಾವು ನೋವಾದರೆ, ದಂಡದ ರೂಪದಲ್ಲಿ ಆ ವಾಹನ ಮಾಲೀಕರೇ ಪರಿಹಾರ ನೀಡಬೇಕು ಎಂದು ಬಿಬಿಎಂಪಿ ಘನತ್ಯಾಜ್ಯ ವಿಶೇಷ ಆಯುಕ್ತ ಹರೀಶ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಪಾಲಿಕೆಗೆ ಸಂಬಂಧಿಸದ ಅನಾಮಧೇಯ ವಾಹನಗಳ ಮೇಲೆ ಪಾಲಿಕೆಯ ಸೇವೆಯಲ್ಲಿ, ಬಿಬಿಎಂಪಿ, ಬಿಬಿಎಂಪಿ ಸೇವೆಯಲ್ಲಿ ಎಂಬ ನಾಮಫಲಕವನ್ನು ಹಾಕಿದ್ದಲ್ಲಿ ಅಂತಹ ವಾಹನಗಳ ಚಾಲಕರ ಮೇಲೆ ಮತ್ತು ಮಾಲೀಕರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುವ ಎಚ್ಚರಿಕೆ ನೀಡಿದೆ.