ಬೆಂಗಳೂರು: ಕರ್ನಾಟಕದಲ್ಲಿ ಉಪಚುನಾವಣೆ ಹೊಸ್ತಿಲಲ್ಲೇ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡಿರುವ ಬಗ್ಗೆ ಸಂಸದ, ಶಿಗ್ಗಾಂವಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ತಂದೆ ಬಸವರಾಜ ಬೊಮ್ಮಾಯಿ ಕೆಂಡಾಮಂಡಲರಾಗಿದ್ದಾರೆ.
ಇದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ. ಇದರ ಬಗ್ಗೆ ಚುನಾವಣಾ ಆಯೋಗ ಕಾಂಗ್ರೆಸ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬೊಮ್ಮಾಯಿ ಆಗ್ರಹಿಸಿದ್ದಾರೆ. ಪ್ರತೀ ಬಾರಿಯೂ ಚುನಾವಣೆಯ ಮುಂಚೆ ಮಹಿಳೆಯರ ಅಕೌಂಟ್ ಗೆ ಗೃಹಲಕ್ಷ್ಮಿ ಹಣ ಹಾಕುವುದು ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಈ ಹಿಂದೆ ಲೋಕಸಭೆ ಚುನಾವಣೆ ಸಂದರ್ಭದಲ್ಲೂ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ ಹಣದ ಕಂತನ್ನು ಮಹಿಳೆಯರ ಖಾತೆಗೆ ಒಟ್ಟಿಗೇ ಹಾಕಿತ್ತು. ಇದೀಗ ಉಪಚುನಾವಣೆಗೆ ಮುನ್ನವೂ ಹಣ ವರ್ಗಾವಣೆ ಮಾಡಿದೆ. ಸರ್ಕಾರ ಪ್ರತೀ ಚುನಾವಣೆಗೆ ಮುನ್ನ ಸರ್ಕಾರದ ಹಣದಲ್ಲಿ ತನ್ನ ರೊಟ್ಟಿ ಸುಡುವ ಕೆಲಸ ಮಾಡುತ್ತಿದೆ. ಇದು ಅತ್ಯಂತ ಖಂಡನೀಯ. ಚುನಾವಣಾ ಆಯೋಗ ಕಣ್ಮುಚ್ಚಿ ಕುಳಿತಿದೆ. ಇದನ್ನು ಕೂಡಲೇ ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಚುನಾವಣೆಗೆ ಕಾಂಗ್ರೆಸ್ ಸರ್ಕಾರದ ಹಣ ಬಳಕೆ ಮಾಡುತ್ತಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಚುನಾವಣೆ ಹೊಸ್ತಿಲಲ್ಲಿ ಗೃಹಲಕ್ಷ್ಮಿ ಹಣ ಹಾಕುವುದೂ ಕೂಡಾ ಮತದಾರರಿಗೆ ಅಮಿಷವೊಡ್ಡಿದಂತೆ ಎಂದು ಬೊಮ್ಮಾಯಿ ಆರೋಪಿಸಿದ್ದಾರೆ.