ಬೆಂಗಳೂರು: ಸಿಎಂ ಸಿದ್ದರಾಮಯ್ಯ ಜೊತೆ ಇದ್ದರೆ ಮುಂದೆ ಕಳ್ಳೆಕಾಯಿನೂ ಸಿಗಲ್ಲ ಎನ್ನುವುದು ಅವರ ಶಾಸಕರಿಗೇ ಗೊತ್ತಾಗಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ವ್ಯಂಗ್ಯ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಹಿಂದೆ ಜೆಡಿಎಸ್, ಕಾಂಗ್ರೆಸ್ ಸರ್ಕಾರವಿದ್ದಾಗ, ನಮ್ಮ ಶಾಸಕರನ್ನು ಅಲ್ಲಾಡಿಸಲು ಸಾಧ್ಯವಾಗಲ್ಲ ಎಂದರು. ಕೊನೆಗೆ ಕಾಂಗ್ರೆಸ್ ನಿಂದ 14 ಶಾಸಕರು ಬಂದರು. ಆವಾಗ ಏನು ಕಳ್ಳೆಕಾಯಿ ತಿಂತಾ ಇದ್ರಾ ಇವರು?
ಈ ಕಾಂಗ್ರೆಸ್ ಶಾಸಕರಿಗೂ ಗೊತ್ತಾಗಿದೆ ಸಿದ್ದರಾಮಯ್ಯ ಜೊತೆಗಿದ್ರೆ ಕಳ್ಳೆಕಾಯಿನೂ ಸಿಗಲ್ಲ ಎಂದು. ಈ ಸರ್ಕಾರ ಬಂದು ಎರಡು ವರ್ಷವಾಗುತ್ತಾ ಬಂತಲ್ಲ. ಇಷ್ಟು ದಿನದಲ್ಲಿ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗ್ತಿಲ್ಲ ಎಂದು ಕಾಂಗ್ರೆಸ್ ಶಾಸಕರಲ್ಲೇ ಅಸಮಾಧಾನವಿದೆ ಎಂದು ಅಶೋಕ್ ಹೇಳಿದ್ದಾರೆ.
ಇನ್ನು, ಸಿದ್ದರಾಮಯ್ಯ ಪ್ರತಿನಿತ್ಯ ನಾನೇ ಮುಖ್ಯಮಂತ್ರಿ ಎಂದು ಹೇಳಿಕೊಂಡು ಓಡಾಡುವ ಪರಿಸ್ಥಿತಿ ಬಂದಿದೆ. ಜಮೀರ್ ಯಾರ ಕಡೆಗೆ ಎಂದು ಅವರಿಗೇ ಗೊತ್ತಿಲ್ಲ. ಡಿಕೆ ಶಿವಕುಮಾರ್ ಚನ್ನಪಟ್ಟಣದಲ್ಲಿ ಈ ಸಾರಿ ಗೆದ್ದರೆ ನಾನೇ ಮುಖ್ಯಮಂತ್ರಿ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಆರ್ ಅಶೋಕ್ ವ್ಯಂಗ್ಯ ಮಾಡಿದ್ದಾರೆ.