ಬೆಂಗಳೂರು: ಇತ್ತೀಚೆಗೆ ರಾಜ್ಯ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವೆ ಬಣ ಬಡಿದಾಟ ಜೋರಾಗಿದೆ. ಇದರ ನಡುವೆ ಯತ್ನಾಳ್ ಬಿಜೆಪಿ ಉಸ್ತುವಾರಿ ವಿರುದ್ಧವೇ ಆರೋಪ ಮಾಡಿದ್ದಾರೆ.
ರಾಜ್ಯ ಬಿಜೆಪಿಯ ಬಣ ಜಗಳ ಹೈಕಮಾಂಡ್ ಅಂಗಳಕ್ಕೆ ತಲುಪಿತ್ತು. ವಿಜಯೇಂದ್ರ ವಿರುದ್ಧ ಹೊಂದಾಣಿಕೆ ರಾಜಕಾರಣ ಆರೋಪ ಮಾಡಿದ್ದ ಯತ್ನಾಳ್ ಬಹಿರಂಗವಾಗಿಯೇ ಕಿಡಿ ಕಾರುತ್ತಿದ್ದರು. ಅತ್ತ ವಿಜಯೇಂದ್ರ ಬಣದವರೂ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಈ ನಡುವೆ ದೆಹಲಿಗೆ ತೆರಳಿದ್ದ ವಿಜಯೇಂದ್ರ ಪಕ್ಷದ ಹಿರಿಯರಿಗೆ ಯತ್ನಾಳ್ ವಿರುದ್ದ ದೂರು ನೀಡಿದ್ದರು.
ಹೀಗಾಗಿ ಯತ್ನಾಳ್ ಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು. ಅದರಂತೆ ದೆಹಲಿಗೆ ಹೋದ ಯತ್ನಾಳ್ ಆಂಡ್ ಟೀಂ ತಮ್ಮ ಅಸಮಾಧಾನಗಳನ್ನು ತೋಡಿಕೊಂಡಿದ್ದರು. ಇದರ ನಡುವೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆದಿದ್ದು ಇಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್, ಸದ್ಯಕ್ಕೆ ರಾಜ್ಯಧ್ಯಕ್ಷ ಬದಲಾವಣೆಯಿಲ್ಲ. ವಿಜಯೇಂದ್ರರೇ ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ಎಂದಿದ್ದರು.
ಇದು ಯತ್ನಾಳ್ ಅಸಮಾಧಾನಕ್ಕೆ ಕಾರಣವಾಗಿದೆ. ರಾಧಾ ಮೋಹನ್ ದಾಸ್ ವಿರುದ್ಧವೇ ಆರೋಪ ಮಾಡಿರುವ ಯತ್ನಾಳ್, ಅವರು ವಿಜಯೇಂದ್ರ ಪರ ಇದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಆದರೆ ಇಂದಿನಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಯಲಿದ್ದು, ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಒಗ್ಗಟ್ಟಾಗಿಯೇ ಹೋರಾಟ ನಡೆಸಲಿದ್ದೇವೆ ಎಂದಿದ್ದಾರೆ.