ನವದೆಹಲಿ: ರಾಜ್ಯ ಬಿಜೆಪಿಯಲ್ಲಿ ಬಣ ರಾಜಕೀಯಕ್ಕೆ ತಾತ್ಕಾಲಿಕವಾಗಿ ಹೈಕಮಾಂಡ್ ಬ್ರೇಕ್ ಹಾಕಿದೆ. ಬಸನಗೌಡ ಪಾಟೀಲ್ ಯತ್ನಾಳ್ ಗೆ ಶಿಸ್ತಿನ ಪಾಠ ಮಾಡಿದೆ. ಇನ್ನು ಮುಂದೆ ಬಹಿರಂಗ ಹೇಳಿಕೆ ನೀಡದಂತೆ ಕ್ಲಾಸ್ ತೆಗೆದುಕೊಂಡಿದೆ.
ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಬಹಿರಂಗವಾಗಿ ಭ್ರಷ್ಟಾಚಾರ, ಹೊಂದಾಣಿಕೆ ರಾಜಕೀಯದಲ್ಲಿ ತೊಡಗಿದ್ದಾರೆ ಎಂದು ಯತ್ನಾಳ್ ಬಹಿರಂಗವಾಗಿಯೇ ಕಿಡಿ ಕಾರುತ್ತಿದ್ದರು. ಅಲ್ಲದೆ ತಮ್ಮದೇ ಬಣ ಕಟ್ಟಿಕೊಂಡು ವಕ್ಫ್ ವಿರುದ್ಧ ಹೋರಾಟ ಶುರು ಮಾಡಿದ್ದರು. ಈ ಕಾರಣಕ್ಕೆ ಅವರಿಗೆ ಬಿಜೆಪಿ ಶಿಸ್ತು ಸಮಿತಿ ದೆಹಲಿಗೆ ಬಂದು ವಿವರಣೆ ನೀಡಲು ಸೂಚಿಸಿತ್ತು.
ದೆಹಲಿಯಲ್ಲಿ ಶಿಸ್ತು ಸಮಿತಿ ಮುಂದೆ ಹಾಜರಾದ ಬಸನಗೌಡ ಪಾಟೀಲ್ ತಮ್ಮ ಅಸಮಾಧಾನಗಳ ಪಟ್ಟಿಯನ್ನು ನೀಡಿದ್ದಾರೆ. ಕೆಲವು ತಟಸ್ಥ ನಾಯಕರಿಗೆ ಒಂದೇ ಕುಟುಂಬದ ಕೈಯಲ್ಲಿ ಬಿಜೆಪಿ ಚುಕ್ಕಾಣಿ ಇರುವುದಕ್ಕೆ ಅಸಮಾಧಾನವಿದೆ ಎಂದು ಯತ್ನಾಳ್ ಮನವರಿಕೆ ಮಾಡಿಕೊಟ್ಟಿದ್ದಾರೆ.
ಇನ್ನು, ಯತ್ನಾಳ್ ಗೆ ಬುದ್ಧಿವಾದ ಹೇಳಿರುವ ಬಿಜೆಪಿ ನಾಯಕರು, ಏನೇ ಇದ್ದರೂ ಅದನ್ನು ಬೀದಿ ಜಗಳ ಮಾಡಿಕೊಳ್ಳುವುದು ಬೇಡ. ಆಂತರಿಕ ವಿಚಾರದ ಬಗ್ಗೆ ಬಹಿರಂಗ ಹೇಳಿಕೆಗಳು ಬೇಡ. ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಿ. ಅದಕ್ಕಾಗಿ ಒಗ್ಗಟ್ಟಾಗಿ ಹೋರಾಟ ಮಾಡಿ ಎಂದು ಸೂಚನೆ ನೀಡಿದ್ದಾರೆ. ಹೈಕಮಾಂಡ್ ಬೇಟಿ ಬಳಿಕ ಹೇಳಿಕೆ ನೀಡಿರುವ ಯತ್ನಾಳ್ ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಹೋರಾಟ ಮಾಡಿ, ಆಂತರಿಕ ವಿಚಾರದ ಚರ್ಚೆ ಬೇಡ ಎಂದು ಹೈಕಮಾಂಡ್ ಹೇಳಿದೆ. ಹೈಕಮಾಂಡ್ ಮಾತಿನಂತೆ ನಡೆದುಕೊಳ್ಳುತ್ತೇನೆ ಎಂದಿದ್ದಾರೆ.