ಬೆಂಗಳೂರು: ಉಪಚುನಾವಣೆ ಫಲಿತಾಂಶದ ಬಳಿಕ ಮತ್ತೆ ಬಿಜೆಪಿಯ ಮತ್ತೊಂದು ಬಣ ವಕ್ಫ್ ವಿರುದ್ಧ ಇಂದಿನಿಂದ ಜನಜಾಗೃತಿ ಹೋರಾಟ ಮಾಡಲು ಹೊರಟಿದೆ. ಇದಕ್ಕೆ ವಿಜಯೇಂದ್ರ ಬಣದಿಂದಲೇ ಪ್ರತಿರೋಧವಿದೆ.
ವಕ್ಫ್ ಹೋರಾಟ ವಿಚಾರದಲ್ಲಿ ಮೊದಲಿನಿಂದಲೂ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಯತ್ನಾಳ್ ಬಣದ ನಡುವೆ ವಾರ್ ನಡೆಯುತ್ತಿತ್ತು. ವಿಜಯೇಂದ್ರ ನೇತೃತ್ವದಲ್ಲಿ ಉಪಚುನಾವಣೆ ಫಲಿತಾಂಶಕ್ಕೆ ಮೊದಲು ಹೋರಾಟ ನಡೆದಿತ್ತು. ಆದರೆ ವಕ್ಫ್ ವಿಚಾರ ಉಪಚುನಾವಣೆ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರಿರಲಿಲ್ಲ.
ಇಂದು ಬೀದರ್ ನಿಂದ ಯತ್ನಾಳ್ ನೇತೃತ್ವದ ಮತ್ತೊಂದು ಬಣ ವಕ್ಫ್ ವಿರುದ್ಧ ಹೋರಾಟ ಆರಂಭಿಸಲಿದೆ. ಯತ್ನಾಳ್ ಜೊತೆಗೆ ರಮೇಶ್ ಜಾರಕಿಹೊಳಿ, ಪ್ರತಾಪ್ ಸಿಂಹ ಮೊದಲಾದ ನಾಯಕರು ಇರಲಿದ್ದಾರೆ. ಈ ಬಣದ ಹೋರಾಟಕ್ಕೆ ಸ್ವತಃ ವಿಜಯೇಂದ್ರ ಬಣದ ವಿರೋಧವಿದೆ.
ಬಿಜೆಪಿ ಮತ್ತೊಂದು ಟೀಂ ಮಾಡಿಕೊಂಡು ವಕ್ಫ್ ಹೋರಾಟ ಮಾಡಬಾರದು ಎಂದು ವಿಜಯೇಂದ್ರ ಅಪಸ್ವರವೆತ್ತಿದ್ದಾರೆ. ಆದರೆ ಇದು ಯಾವುದಕ್ಕೂ ಕಿವಿಯೇ ಕೊಡದೇ ಯತ್ನಾಳ್ ಟೀಂ ಜನಜಾಗೃತಿ ಅಭಿಯಾನ ನಡೆಸಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ನಿರ್ಧರಿಸಿದೆ.