ಬೆಂಗಳೂರು: ಬ್ಯಾಂಕ್ ವಂಚನೆ ಪ್ರಕರಣದಲ್ಲಿ ದೋಷಿಯಾಗಿರುವ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಇಂದು ಬೆಳಗ್ಗೆ ಕೃಷ್ಣಯ್ಯ ಶೆಟ್ಟಿ, ಎಂಟಿವಿ ರೆಡ್ಡಿ, ಮುನಿರಾಜು, ಶ್ರೀನಿವಾಸ್ ಅವರು ದೋಷಿಗಳು ಎಂದು ಕೋರ್ಟ್ ಹೇಳಿತ್ತು. ಇಂದು ಸಂಜೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ.
3 ವರ್ಷ ಶಿಕ್ಷೆ ವಿಧಿಸಿದ ಬೆನ್ನಲ್ಲೇ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಕೃಷ್ಣಯ್ಯ ಶೆಟ್ಟಿ ಪರ ವಕೀಲರು ಮೇಲ್ಮನವಿ ಸಲ್ಲಿಸುವುದಾಗಿ ಮನವಿ ಮಾಡಿದ ಬೆನ್ನಲ್ಲೇ ಕೋರ್ಟ್ 30 ದಿನಗಳ ಜಾಮೀನು ಮಂಜೂರು ಮಾಡಿದೆ.
ಏನಿದು ಪ್ರಕರಣ: 2012 ರಲ್ಲಿ ಬಾಲಾಜಿಕೃಪಾ ಎಂಟರ್ಪ್ರೈಸಸ್ನ ಮಾಲೀಕ ಕೃಷ್ಣಯ್ಯ ಶೆಟ್ಟಿ 1993ರಲ್ಲಿ ಸಾರ್ವಜನಿಕ ಉದ್ದಿಮೆಗಳ ನೌಕರರಿಗೆ ಗೃಹ ನಿರ್ಮಾಣಕ್ಕೆ ಸಾಲ ಕೊಡಿಸುವುದಾಗಿ ಆಮಿಷವೊಡ್ಡಿ, ಹಲವು ನೌಕರರ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ 7.17 ಕೋಟಿ ರೂ. ಬ್ಯಾಂಕ್ ಸಾಲ ಪಡೆದಿದ್ದರು.
ಈವರೆಗೆ ₹3.53 ಕೋಟಿ ಸಾಲ ತೀರಿಸಿಲ್ಲ ಎಂದು ಆರೋಪಿಸಲಾಗಿತ್ತು. ಪ್ರಕರಣವನ್ನು ಸಿಬಿಐ ತನಿಖೆ ನಡೆಸಿ, ಚಾರ್ಜ್‌ಶೀಟ್ ಸಲ್ಲಿಸಿತ್ತು.<>