Publish Date: Sun, 06 Oct 2024 (17:51 IST)
Updated Date: Sun, 06 Oct 2024 (17:53 IST)
ಬೆಂಗಳೂರು: ನಿನ್ನೆ ರಾತ್ರಿಯಿಡೀ ಮಳೆ ಸುರಿದು ಅವಾಂತರ ಸೃಷ್ಟಿಸಿದ ಬೆನ್ನಲ್ಲೇ ಇಂದೂ ಬೆಂಗಳೂರಿಗರು ಮತ್ತೆ ಮಳೆಗೆ ಸಜ್ಜಾಗಬೇಕಿದೆ. ಇದೀಗ ದಟ್ಟ ಮೋಡ ಕವಿದ ವಾತಾವರಣವಿದ್ದು ಇಂದೂ ಸಂಜೆ ಮಳೆಯಾಗಲಿದೆ.
ಹವಾಮಾನ ಇಲಾಖೆ ಈಗಾಗಲೇ ಮುಂದಿನ ಎರಡು ದಿನಗಳಿಗೆ ಯೆಲ್ಲೊ ಅಲರ್ಟ್ ಘೋಷಣೆ ಮಾಡಿತ್ತು. ಹೀಗಾಗಿ ಇಂದೂ ಮಳೆಯಾಗಲಿದೆ. ನಿನ್ನೆ ಮಳೆಯಿಂದಾಗಿ ಕೆಲವು ಮನೆಗಳಿಗೆ ನೀರು ನುಗ್ಗಿದ್ದರೆ, ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.
ಇದರ ಜೊತೆಗೆ ಕೆಲವು ಕಡೆ ಕಂಪೌಂಡ್ ಕುಸಿತು, ರಸ್ತೆ ಕುಸಿದು ಅನಾಹುತಗಳಾಗಿವೆ. ಒಂದು ಮಳೆಗೇ ಈ ಪರಿಸ್ಥಿತಿಯಾದರೆ ಹೇಗೆ ಎಂದು ಜನ ಹಿಡಿಶಾಪ ಹಾಕುತ್ತಿದ್ದಾರೆ. ಇದರ ನಡುವೆ ಇಂದೂ ಮಳೆಯಾಗುವ ಲಕ್ಷಣವಿದೆ. ಮಳೆಯ ವೇಳೆ ಆದಷ್ಟು ಮನೆಯಲ್ಲಿಯೇ ಇದ್ದು ಅನಾಹುತಗಳನ್ನು ತಪ್ಪಿಸಿಕೊಳ್ಳುವುದೇ ಉತ್ತಮ.
ಮಳೆ ಅನಾಹುತ ತಡೆಯಲು ಬಿಬಿಎಂಪಿ ಎಷ್ಟೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರೂ ಪ್ರತೀ ಮಳೆಗೂ ಜನರ ಸಂಕಷ್ಟ ತಪ್ಪಿದ್ದಲ್ಲ. ಇದೇ ರೀತಿ ಎರಡು ದಿನ ಮತ್ತೆ ಮಳೆ ಮುಂದುವರಿದರೆ ಜನರ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ.