ಬೆಂಗಳೂರು: ಈ ವಾರಂತ್ಯದಲ್ಲಿ ಯುಗಾದಿ ಹಬ್ಬವಿದೆ ಎಂದು ಊರಿಗೆ ತೆರಳಲು ತಯಾರಿ ಮಾಡಿಕೊಂಡಿದ್ದವರಿಗೆ ಬಸ್ ದರ ನೋಡಿ ಶಾಕ್ ಆಗುವಂತಿದೆ. ಬೆಂಗಳೂರಿನಿಂದ ರಾಜ್ಯದ ವಿವಿಧ ಊರುಗಳಿಗೆ ತೆರಳಲು ಬಸ್ ದರ ಎಷ್ಟಾಗಿದೆ ನೋಡಿ.
ಖಾಸಗಿ ಬಸ್ ಮಾತ್ರವಲ್ಲದೆ ಕೆಎಸ್ ಆರ್ ಟಿಸಿ ಬಸ್ ಗಳ ದರವೂ ಏರಿಕೆಯಾಗಿದೆ. ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ಸಾಮಾನ್ಯ ದಿನಗಳಲ್ಲಿ ಇರುವ ದರಕ್ಕಿಂತ 200-300 ರೂ.ಗಳಷ್ಟು ಏರಿಕೆಯಾಗಿದೆ. ಖಾಸಗಿ ಬಸ್ ಗಳಲ್ಲಂತೂ ಎರಡು ಪಟ್ಟು ಹೆಚ್ಚಾಗಿದೆ.
ಹಬ್ಬದ ಸಂದರ್ಭದಲ್ಲಿ ಊರಿಗೆ ತೆರಳುವವರ ಸಂಖ್ಯೆ ಜಾಸ್ತಿ. ಇದನ್ನೇ ಬಂಡವಾಳ ಮಾಡಿಕೊಂಡು ಬಸ್ ದರವನ್ನೂ ಹೆಚ್ಚಿಸಲಾಗುತ್ತದೆ. ಖಾಸಗಿ ಬಸ್ ಗಳಂತೂ ಮಿತಿಯಿಲ್ಲದೇ ಏರಿಕೆ ಮಾಡುತ್ತವೆ. ಇದೀಗ ಬೆಂಗಳೂರಿನಿಂದ ಬೇರೆ ಬೇರೆ ಊರುಗಳಿಗೆ ತೆರಳಲು ಬಸ್ ದರವೆಷ್ಟು ನೋಡಿ.
ಖಾಸಗಿ ಬಸ್ ದರ
ಬೆಂಗಳೂರು-ಮಂಗಳೂರು ಸಾಮಾನ್ಯವಾಗಿ 650 ರಿಂದ 1300 ರೂ.ಗಳಿದ್ದರೆ ಈಗ 1200 ರಿಂದ 4000 ರೂ.ವರೆಗೆ ತಲುಪಿದೆ. ಬೆಂಗಳೂರಿನಿಂದ ಹುಬ್ಬಳ್ಳಿಗೂ ಈಗ 1200 ರಿಂದ 4200 ರೂ.ವರೆಗೆ ದರವಿದೆ. ಬೆಂಗಳೂರಿನಿಂದ ಧಾರವಾಡಕ್ಕಂತೂ 1000 ರೂ.ಗಳಿಂದ 5000 ರೂ.ವರೆಗೆ ಟಿಕೆಟ್ ದರ ತಲುಪಿದೆ. ಬೆಂಗಳೂರಿನಿಂದ ಹಾಸನಕ್ಕೆ 750 ರೂ.ಗಳಿಂದ 1600 ರೂ.ವರೆಗೆ ದರವಾಗಿದೆ.
ಹೆಚ್ಚಿನ ಊರುಗಳಿಗೆ ಟಿಕೆಟ್ ದರ ಖಾಸಗಿ ಬಸ್ ನಲ್ಲಿ ಸರಿಯಾಗಿ ದುಪ್ಪಟ್ಟಾಗಿದ್ದರೆ ಇತ್ತ ಕೆಎಸ್ ಆರ್ ಟಿಸಿಯಲ್ಲೂ ಕಡಿಮೆಯೇನಲ್ಲ. ಬೆಂಗಳೂರಿನಿಂದ ವಿವಿಧ ಊರುಗಳಿಗೆ ತೆರಳುವ ಎಲ್ಲಾ ಮಾದರಿಯ ಬಸ್ ದರದಲ್ಲೂ 200-300 ರೂ.ಗಳಷ್ಟು ಹೆಚ್ಚಳವಾಗಿದೆ. ಕೇವಲ ಕೆಎಸ್ ಆರ್ ಟಿಸಿ ನಾರ್ಮಲ್ ಬಸ್ ನಲ್ಲಿ ಮಾತ್ರ ಎಂದಿನಂತೆ ಟಿಕೆಟ್ ದರವಿದೆ.