Select Your Language

Notifications

webdunia
webdunia
webdunia
webdunia

ಬೆಂಗಳೂರು ನಗರ ವಿ.ವಿ. ಗುಣಮಟ್ಟದ ಬೆಳವಣಿಗೆ ಅಗತ್ಯ: ಅಶ್ವತ್ಥನಾರಾಯಣ

ಬೆಂಗಳೂರು ನಗರ ವಿ.ವಿ. ಗುಣಮಟ್ಟದ ಬೆಳವಣಿಗೆ ಅಗತ್ಯ: ಅಶ್ವತ್ಥನಾರಾಯಣ
bangalore , ಸೋಮವಾರ, 11 ಏಪ್ರಿಲ್ 2022 (19:04 IST)
vv
ಬೆಂಗಳೂರು: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಬೆಂಗಳೂರು ನಗರ ವಿಶ್ವವಿದ್ಯಾಲಯವು ರಾಜ್ಯ ರಾಜಧಾನಿಯ ಹೆಗ್ಗುರುತಾಗಿದ್ದು, ಈ ನಗರಕ್ಕಿರುವ ಜಗದ್ವಿಖ್ಯಾತಿಯನ್ನು ಮೀರಿಸುವ ಹಾಗೆ ಬೆಳೆಯಬೇಕು. ಶಿಕ್ಷಣದ ಗುಣಮಟ್ಟಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಜಾಗತಿಕ ಮಟ್ಟದ ಸ್ಪರ್ಧೆಯನ್ನು ಎದುರಿಸಲು ಇದನ್ನು ಬಿಟ್ಟು ಬೇರೆ ದಾರಿ ಇಲ್ಲಎಂದು ಸಮಕುಲಾಧಿಪತಿಗಳೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
 
ಸೆಂಟ್ರಲ್ ಕಾಲೇಜು ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸೋಮವಾರ ನಡೆದ  ವಿಶ್ವವಿದ್ಯಾಲಯದ ಪ್ರಪ್ರಥಮ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, `ಈ ವಿವಿ ವ್ಯಾಪ್ತಿಯಲ್ಲಿ ಕೇವಲ 1.30 ಲಕ್ಷ ವಿದ್ಯಾರ್ಥಿಗಳಷ್ಟೇ ಇದ್ದಾರೆ. ಬೆಂಗಳೂರಿನಲ್ಲಿರುವ 1 ಕೋಟಿಗೂ ಹೆಚ್ಚಿನ ಜನಸಂಖ್ಯೆಗೆ ಹೋಲಿಸಿದರೆ ಇದು ತೀರಾ ಕಮ್ಮಿಯಾಯಿತು. ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆಯು ಇದರ ಎರಡು ಪಟ್ಟಾದರೂ ಆಗಿ ಬೆಳೆಯಬೇಕು’ ಎಂದರು.
 
ಶಿಕ್ಷಣದ ಗುಣಮಟ್ಟವನ್ನು ತಂತ್ರಜ್ಞಾನದ ಅಳವಡಿಕೆಯೊಂದಿಗೆ ಆಮೂಲಾಗ್ರವಾಗಿ ಸುಧಾರಿಸುವ ಕೆಲಸ ರಾಜ್ಯದಲ್ಲಿ ನಡೆಯುತ್ತಿದೆ. ಇದರಿಂದಾಗಿ ಉನ್ನತ ಶಿಕ್ಷಣದಲ್ಲಿ ಯಾವುದೇ ಅಕ್ರಮಗಳಿಗೆ ಅವಕಾಶವಿರುವುದಿಲ್ಲ. ಬದಲಿಗೆ, ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ಸಂಸ್ಕೃತಿಗಳು ಇಲ್ಲಿ ಬೇರೂರುತ್ತವೆ ಎಂದು ಅವರು ನುಡಿದರು.
 
ಉನ್ನತ ಶಿಕ್ಷಣ ಕ್ಷೇತ್ರವು ಎಲ್ಲದಕ್ಕೂ ಸರಕಾರದ ಕಡೆಗೇ ನೋಡಬಾರದು. ಬದಲಿಗೆ ಅದು ಸ್ವಾವಲಂಬಿಯಾಗಬೇಕು. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲಿ ವಿ.ವಿ.ಗಳಿಗೆ ಸಂಪೂರ್ಣ ಸ್ವಾಯತ್ತೆ ಮತ್ತು ಸ್ವಾತಂತ್ರ್ಯವನ್ನು ಕೊಡಲಾಗುವುದು. ಜತೆಗೆ, ಎಲ್ಲೆಡೆಗಳಲ್ಲೂ ಕಾಗದರಹಿತ ವಿವಿ ಆಡಳಿತವನ್ನು ಜಾರಿಗೆ ತರಲಾಗುತ್ತಿದೆ ಎಂದು ಅವರು ತಿಳಿಸಿದರು.
 
ಇದುವರೆಗೂ ಶಿಕ್ಷಣ ಕ್ಷೇತ್ರಕ್ಕೂ ಉದ್ಯಮರಂಗಕ್ಕೂ ಯಾವುದೇ ಅರ್ಥಪೂರ್ಣ ಸಂಬಂಧ ಇರಲಿಲ್ಲ. ಆದರೆ, ಎನ್ಇಪಿ ಅಡಿಯಲ್ಲಿ ಈಗ ಉದ್ಯಮರಂಗ ಕೂಡ ಶಿಕ್ಷಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲಾಗುತ್ತಿದ್ದು, ಸಾಕಷ್ಟು ಒಡಂಬಡಿಕೆಗಳನ್ನು ಉತ್ತೇಜಿಸಲಾಗುತ್ತಿದೆ. ಹೀಗಾಗಿ ನಮ್ಮ ವಿದ್ಯಾರ್ಥಿಗಳು ಜಗತ್ತಿನ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಿಗೆ ಹೋಗಿ, ಅಧ್ಯಯನ ಮಾಡಿ ಟ್ವಿನ್ನಿಂಗ್ ಡಿಗ್ರಿ ಪಡೆಯಲು ಅವಕಾಶ ಕಲ್ಪಿಸಲಾಗುತ್ತಿದೆ. ಉದ್ಯಮಗಳ ಸಹಯೋಗದಿಂದಾಗಿ ನಿರುದ್ಯೋಗ ಸಮಸ್ಯೆ ಕೂಡ ನಿವಾರಣೆಯಾಗುತ್ತಿದೆ ಎಂದು ಅಶ್ವತ್ಥನಾರಾಯಣ ಪ್ರತಿಪಾದಿಸಿದರು.
 
ವಿಶ್ವವಿದ್ಯಾಲಯದ ಶಿಕ್ಷಣವೆಂದರೆ, ಸಮಕಾಲೀನ ಜಗತ್ತಿನ ಆಗುಹೋಗುಗಳಿಗೆ ತಕ್ಕಂತೆ ಇರಬೇಕು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶಿಕ್ಷಣದ ಡಿಜಿಟಲೀಕರಣದ ಜತೆಗೆ ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಪಠ್ಯಕ್ರಮವನ್ನು ಪುನಾರೂಪಿಸಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ಅಗತ್ಯ ಕೌಶಲ್ಯ ಕಲಿಕೆಯು ಸಾಧ್ಯವಾಗುತ್ತಿದ್ದು, ಎಲ್ಲರೂ ಅವರವರ ಕನಸಿನ ಉದ್ಯೋಗಗಳನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಕೆಲವೇ ವರ್ಷಗಳಲ್ಲಿ ಇದರ ಫಲಗಳು ಸಮಾಜಕ್ಕೆ ಸಿಗಲಿವೆ ಎಂದು ಸಚಿವರು ವಿವರಿಸಿದರು.
 
ಬೆಂಗಳೂರು ನಗರ ವಿವಿಯಲ್ಲಿ ವಿದ್ಯಾರ್ಥಿನಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಚಿನ್ನದ ಪದಕ ವಿಜೇತರಾಗಿರುವುದು ಸಂತಸದ ಸಂಗತಿಯಾಗಿದೆ. ಇದರಿಂದ ಮಹಿಳಾ ಸಂಕುಲದ ಸಬಲೀಕರಣಕ್ಕೆ ಮುನ್ನುಡಿ ಬರೆದಂತಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
 
ಕಾರ್ಯಕ್ರಮದಲ್ಲಿ ಕುಲಾಧಿಪತಿಗಳಾಗಿರುವ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಬಾಹ್ಯಾಕಾಶ ವಿಜ್ಞಾನಿ ಡಾ.ಕೆ.ಕಸ್ತೂರಿರಂಗನ್, ಕುಲಪತಿ ಪ್ರೊ.ಲಿಂಗರಾಜ ಗಾಂಧಿ, ನಿಕಟಪೂರ್ವ ಕುಲಪತಿ ಡಾ.ಜಾಫೆಟ್ ಮುಂತಾದವರು ಉಪಸ್ಥಿತರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಎಸ್‌ಎಸ್ಎಲ್‌ಸಿ ಪರೀಕ್ಷೆ ಸುಸೂತ್ರವಾಗಿ ಮುಗಿದಿದೆ-ಮೇ 2ನೇ ವಾರ ಫಲಿತಾಂಶ