ಬೆಂಗಳೂರು: ದೇಶದ ಹೆಮ್ಮೆಯ ಲೋಹದ ಹಕ್ಕಿಗಳು ಇಂದಿನಿಂದ ಬೆಂಗಳೂರು ವಾಯುನೆಲೆಯಲ್ಲಿ ರೆಕ್ಕೆ ಬಿಚ್ಚಿ ಹಾರಾಟ ನಡೆಸಲಿದೆ. ಬೆಂಗಳೂರು ಏರ್ ಶೋ ಇಂದಿನಿಂದ ಆರಂಭವಾಗಲಿದ್ದು ಸಾರ್ವಜನಿಕರಿಗೆ ಯಾವಾಗಿನಿಂದ ಎಂಟ್ರಿ, ಟಿಕೆಟ್ ಖರೀದಿ ಹೇಗೆ ಇಲ್ಲಿದೆ ಸಂಪೂರ್ಣ ವಿವರ.
ಇಂದಿನಿಂದ ಫೆಬ್ರವರಿ 14 ರವರೆಗೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರ್ ಶೋ ನಡೆಯಲಿದೆ. ಏಷ್ಯಾದ ಅತೀ ದೊಡ್ಡ ಏರ್ ಶೋ ಆಗಿರುವ 15 ನೇ ಏರೋ ಇಂಡಿಯಾ ಶೋ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯಲಿದೆ. ವಾಯುಪಡೆಯ ಹೆಮ್ಮೆಯ ಯುದ್ಧ ವಿಮಾನಗಳು ತಮ್ಮ ಕಸರತ್ತು ಪ್ರದರ್ಶಿಸಲಿವೆ.
ಇದರ ಜೊತೆಗೆ ವಾಯು ಪಡೆಯ ವಸ್ತು ಪ್ರದರ್ಶನ ಮಳಿಗೆ, ಯುದ್ಧ ವಿಮಾನಗಳ ವೀಕ್ಷಣೆಗೂ ಅವಕಾಶವಿರಲಿದೆ. ಆದರೆ ಎಲ್ಲಾ ದಿನಗಳಂದು ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶವಿಲ್ಲ. ಕೊನೆಯ ಎರಡು ದಿನಗಳಾದ ಫೆಬ್ರವರಿ 13 ಮತ್ತು 14 ರಂದು ಮಾತ್ರ ಸಾರ್ವಜನಿಕರಿಗೆ ಪ್ರವೇಶವಿದೆ.
ಸಾರ್ವಜನಿಕರು
www.aeroindia.in ಎಂಬ ವೆಬ್ ಸೈಟ್ ಮುಖಾಂತರ ಆನ್ ಲೈನ್ ನಲ್ಲೇ ಟಿಕೆಟ್ ಬುಕ್ ಮಾಡಬಹುದಾಗಿದೆ. ಟಿಕೆಟ್ ದರ 1,000 ರೂ.ನಿಂದ 2,500 ರೂ.ಗಳಷ್ಟು ನಿಗದಿಯಾಗಿದೆ. 1,000 ರೂ. ಟಿಕೆಟ್ ನಿಂದ ವೈಮಾನಿಕಾ ಪ್ರದರ್ಶನದ ವೀಕ್ಷಣಾ ಪ್ರದೇಶಕ್ಕೆ ಮಾತ್ರ ಅನ್ವಯವಾಗಲಿದೆ. ಸಾಮಾನ್ಯ ಭೇಟಿಗೆ 2,500 ರೂ. ಟಿಕೆಟ್ ದರ ಇದೆ. ವಾಣಿಜ್ಯೋದ್ಯಮಿಗಳ ವೀಕ್ಷಣೆಗೆ 5,000 ರೂ. ಟಿಕೆಟ್ ದರವಿದೆ. ಇನ್ನು ಏರ್ ಶೋಗೆ ಆಗಮಿಸುವವರಿಗೆ ಬಿಎಂಟಿಸಿಯಿಂದ ಉಚಿತ ವ್ಯವಸ್ಥೆ ಕಲ್ಪಿಸಲಾಗಿದೆ.
ಸ್ವಂತ ವಾಹನಗಳಲ್ಲಿ ಬರುವವರು ಜಿಕೆವಿಕೆ, ಜಕ್ಕೂರು ಆವರಣದಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡಲಾಗಿದೆ. ಅಲ್ಲಿಂದ ಬಿಎಂಟಿಸಿ ಬಸ್ ಸೌಲಭ್ಯ ಪಡೆದುಕೊಳ್ಳಬಹುದು. ಇನ್ನು, ಏರ್ ಶೋಗೆ ಬರುವವರು ತಪ್ಪದೇ ಸರ್ಕಾರ ನೀಡಲಾದ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ನಂತಹ ಗುರುತಿನ ಚೀಟಿಯನ್ನು ತಪ್ಪದೇ ತೆಗೆದುಕೊಂಡು ಬನ್ನಿ. ಏರ್ ಶೋಗೆ ಹೊರಗಿನಿಂದ ಯಾವುದೇ ಆಹಾರ ಪದಾರ್ಥ ಒಯ್ಯಲು ಅವಕಾಶವಿಲ್ಲ. ಆದರೆ ಫೋಟೋ, ವಿಡಿಯೋ ಮಾಡಲು ಕ್ಯಾಮರಾ ತೆಗೆದುಕೊಂಡು ಹೋಗಲು ಅನುಮತಿಯಿದೆ.