Publish Date: Fri, 22 Oct 2021 (07:38 IST)
Updated Date: Fri, 22 Oct 2021 (06:41 IST)
ಸಿಂಧಗಿ : ಬಿಜೆಪಿಯವರು ನನ್ನ ವೈಯಕ್ತಿಕ ವಿಚಾರಗಳನ್ನು ಇಲ್ಲಿಗೆ ಬಿಡುವುದು ಒಳ್ಳೆಯದು. ಇಲ್ಲವಾದರೆ ಆರ್ ಎಸ್ ಎಸ್ ಶಾಖೆಗಳಿಂದ ತರಬೇತಿ ಪಡೆದುಕೊಂಡು ಬಿಜೆಪಿಗೆ ಬಂದವರೆಲ್ಲ ನಡೆಸುತ್ತಿರುವ ಅಸಹ್ಯವನ್ನು ಎಲ್ಲವನ್ನೂ ಬಿಚ್ಚಿಡಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಖಡಕ್ ಎಚ್ಚರಿಕೆ ನೀಡಿದರು.
ಇವತ್ತು ಬಿಜೆಪಿಯವರು ನನ್ನ ಖಾಸಗಿ ವಿಚಾರಗಳನ್ನು ಕೆದಕಿದ್ದಾರೆ. ಮತ್ತೆ ಮತ್ತೆ ಕೆದಕುತ್ತಿದ್ದಾರೆ. ಅವರಿಗೆ ನೇರವಾಗಿ ಹೇಳಲು ಬಯಸುತ್ತೇನೆ. ನಾನು ಆರ್ ಎಸ್ ಎಸ್ ಬಗ್ಗೆ ಎತ್ತಿರುವ ಪ್ರಶ್ನೆಗಳ ಬಗ್ಗೆ ಉತ್ತರ ನೀಡಲಿ. ಅದರ ಹೊರತಾಗಿ ನನ್ನ ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪ ಮಾಡಿದರೆ ನಾನು ಅವರೆಲ್ಲರ ವಿಚಾರಗಳನ್ನು ಮಾಧ್ಯಮಗಳ ಮುಂದೆ ಇಡಬೇಕಾಗುತ್ತದೆ. ಅವೆಲ್ಲವನ್ನೂ ನೀವು ನೋಡಿದರೆ ಅಸಹ್ಯಪಡುತ್ತೀರಿ.
ಬಿಜೆಪಿ ನಾಯಕರದ್ದು ಬ್ರಹ್ಮಾಂಡ ಬಂಡವಾಳ ಇದೆ. ಹಿಂದೆ ಚಿಕ್ಕಮಗಳೂರಿನ ಮಹಿಳಾ ಸರಕಾರಿ ಅಧಿಕಾರಿಯೊಬ್ಬರ ಪತಿ ಕೆಆರ್ ಎಸ್ ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಸೇರಿ ಅನೇಕರ ಕಥೆಗಳು ನನಗೆ ಚೆನ್ನಾಗಿ ಗೊತ್ತಿವೆ. ಸುಮ್ಮನೆ ಕೆಣಕುತ್ತಾ ಹೋದರೆ ಅದೇ ನಿಮಗೆ ತಿರುಗುಬಾಣ ಆಗುತ್ತದೆ. ಬಿಜೆಪಿ ನಾಯಕರಿಗೆ ಇದು ನಾನು ಕೊಡುವ ನೇರ ಎಚ್ಚರಿಕೆ.