Publish Date: Wed, 12 Dec 2018 (16:38 IST)
Updated Date: Wed, 12 Dec 2018 (16:40 IST)
ಒತ್ತುವರಿ ಮಾಡಿಕೊಂಡಿದ್ದ ದೇವಸ್ಥಾನದ ಜಾಗದ ತೆರವಿಗೆ ತಮ್ಮವರೇ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿದ ವ್ಯಕ್ತಿಯೊಬ್ಬ ದೂರು ನೀಡಿದವರ ಮೇಲೆ ಮಚ್ಚಿನಿಂದ ಕೊಚ್ಚಿದ್ದು, ಕೊಲೆ ಯತ್ನ ನಡೆಸಿದ್ದಾನೆ.
ತಾನು ಒತ್ತುವರಿ ಮಾಡಿಕೊಂಡಿದ್ದ ಜಾಗವನ್ನ ಪಂಚಾಯತಿ ಅಧಿಕಾರಿಗಳ ಮೂಲಕ ತಮ್ಮವರೇ ತೆರವುಗೊಳಿಸಿದ್ದಾರೆಂದು ಆಕ್ರೋಶಗೊಂಡ ವ್ಯಕ್ತಿಯೊಬ್ಬ ದೂರು ನೀಡಿದವರ ಮೇಲೆ ಮಚ್ಚಿನಿಂದ ಕೊಚ್ಚಿ ಕೊಲೆ ಯತ್ನ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕು ದಿನ್ನಹಳ್ಳಿ ಗ್ರಾಮದಲ್ಲಿ ನಡೆದಿದೆ.
ದಿನ್ನಹಳ್ಳಿ ಗ್ರಾಮದ ಪಾತಾಳೇಶ್ವರ ದೇವಸ್ಥಾನದ ಜಾಗವನ್ನು ಆದಿನಾರಾಯಣರೆಡ್ಡಿ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಇದೇ ಗ್ರಾಮದ ಸುದರ್ಶನ್ ರೆಡ್ಡಿ ಮತ್ತಿತರರು ದೂರು ನೀಡಿದ್ದಾರೆಂದು ಆರೋಪಿಸಿ ಆದಿನಾರಾಯಣರೆಡ್ಡಿ ಮತ್ತವರ ಮಗ ನಾರಾಯಣಸ್ವಾಮಿ ಮಚ್ಚಿನಿಂದ ದಾಳಿ ಮಾಡಿದ್ದಾರೆ. ಸುದರ್ಶನ್ ರೆಡ್ಡಿ ಸಹೋದರ ಪ್ರತಾಪ್ ರೆಡ್ಡಿ ಮೇಲೆ ಮಚ್ಚಿನಿಂದ ದಾಳಿ ಮಾಡಿದ್ದಾರೆ.
ಈ ವೇಳೆ ಬಿಡಿಸಲು ಹೋದ ವೆಂಕಟೇಶ್, ಕೃಷ್ಣಮೂರ್ತಿ ಮೇಲೂ ದಾಳಿ ಮಾಡಿದ್ದರಿಂದ ಮೂವರು ತೀವ್ರವಾಗಿ ಗಾಯಗೊಂಡು ಚಿಕ್ಕಬಳ್ಳಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಗುಡಿಬಂಡೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನ ಬಂಧಿಸಿದ್ದಾರೆ.