Publish Date: Thu, 02 Aug 2018 (20:52 IST)
Updated Date: Thu, 02 Aug 2018 (20:56 IST)
ಹೆಂಡತಿಗೆ ಕೈಕೊಟ್ಟ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಎರಡು ವರ್ಷಗಳಿಂದ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕುಂದಾಪುರ ಪೊಲೀಸರು ಶಿವಮೊಗ್ಗ ಜಿಲ್ಲೆಯ ಶಿರಳಕೊಪ್ಪದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕುಂದಾಪುರ ಪಿಎಸೈ ಹರೀಶ್ ಆರ್. ನಾಯಕ್ ಮಾರ್ಗದರ್ಶನದಲ್ಲಿ ಹೆಡ್‌ಕಾನ್ಸ್‌ಟೇಬಲ್ ಹರೀಶ್ ಹಾಗೂ ಕಾನ್ಸ್‌ಟೇಬಲ್ ಪ್ರಾಣೇಶ್ ಅವರು ಆರೋಪಿ ಪ್ರಶಾಂತ್ ಮಂಚಿಕೊಪ್ಪ ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತನನ್ನು ಕುಂದಾಪುರ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆಗಸ್ಟ್ 16ರ ತನಕ ಆರೋಪಿ ಪ್ರಶಾಂತ್‌ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕೋಟೇಶ್ವರದ ಯುವತಿಯೊಂದಿಗೆ ಪ್ರಶಾಂತ್ ವಿವಾಹವಾಗಿದ್ದನು. ಬಳಿಕ ಇವರಿಬ್ಬರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದು, ಪ್ರಶಾಂತ್ ಬೇರೆ ಮಹಿಳೆಯೊಂದಿಗೆ ವಿವಾಹವಾಗಿದ್ದನು. ಇದೇ ವಿಚಾರವಾಗಿ ಈತನ ವಿರುದ್ಧ ಕೇಸು ದಾಖಲಾಗಿತ್ತು. ಕಳೆದ ಎರಡು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರಿಂದ ಪ್ರಶಾಂತ್ ವಿರುದ್ಧ ನ್ಯಾಯಾಲಯ ವಾರಂಟ್ ಜಾರಿಗೊಳಿಸಿತ್ತು.