10ನೇ ಶತಮಾನದ್ದು ಎನ್ನಲಾದ ಉತ್ತರ ಪ್ರದೇಶದ ಬುಂದೇಲಖಂಡ ಜಿಲ್ಲೆಯ ಲೋಖಾರಿ ದೇವಸ್ಥಾನದಿಂದ ಕಳವಾಗಿದ್ದ ಮೇಕೆ ಮುಖಧಾರಿ, ಯೋಗ ಭಂಗಿಯಲ್ಲಿರುವ ಯೋಗಿನಿ ದೇವಿಯ ವಿಗ್ರಹ ಲಂಡನ್ನಲ್ಲಿ ಪತ್ತೆಯಾಗಿದ್ದು, ಅದನ್ನು ಭಾರತಕ್ಕೆ ಹಸ್ತಾಂತರ ಮಾಡಲಾಗಿದೆ.
1980ರಲ್ಲಿ ಬುಂದೇಲಖಂಡದ ಲೋಖಾರಿ ದೇವಸ್ಥಾನದಿಂದ ನಾಪತ್ತೆಯಾಗಿದ್ದ ಯೋಗಿನಿ ವಿಗ್ರಹವನ್ನು ಅಕ್ರಮವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆ ಮೂಲಕ ಲಂಡನ್ನಿಗೆ ಒಯ್ಯಲಾಗಿತ್ತು. ಅಲ್ಲಿನ ಗಾರ್ಡನ್ ಒಂದರಲ್ಲಿ ಪತ್ತೆಯಾಗಿರುವ ವಿಗ್ರಹವನ್ನು ಉತ್ತರ ಪ್ರದೇಶದಲ್ಲಿ ಕಳವಾಗಿದ್ದ ಯೋಗಿನಿ ವಿಗ್ರಹವೆಂದು ಗುರುತಿಸಲಾಗಿದ್ದು, ಅದನ್ನು ಭಾರತೀಯ ಹೈಕಮಿಷನರ್ ಗಾಯತ್ರಿ ಕುಮಾರ್ ಅವರಿಗೆ ಔಪಚಾರಿಕವಾಗಿ ಹಸ್ತಾಂತರ ಮಾಡಲಾಗಿದೆ. ವಿಗ್ರಹವನ್ನು ಭಾರತೀಯ ಪ್ರಾಚ್ಯವಸ್ತು ಇಲಾಖೆಗೆ ಹಸ್ತಾಂತರ ಮಾಡಲಿದ್ದಾರೆ.
ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಪುರಾತನ ವಿಗ್ರಹವೊಂದನ್ನು ಮರಳಿ ಪಡೆಯುವ ಯೋಗ ಸಿಕ್ಕಿದ್ದು ಅತ್ಯಂತ ಸಂತಸ ತಂದಿದೆ. ಕಳೆದ ಅಕ್ಟೋಬರ್ ನಲ್ಲಿ ಈ ವಿಗ್ರಹ ಪತ್ತೆಯಾಗಿತ್ತು. ಆನಂತರ ಇದನ್ನು ಹಸ್ತಾಂತರ ಪ್ರಕ್ರಿಯೆ ನಡೆಸಲಾಗಿತ್ತು. ಭಾರತದಲ್ಲಿ ನ್ಯಾಶನಲ್ ಮ್ಯೂಸಿಯಂನಲ್ಲಿ ವಿಗ್ರಹವನ್ನು ಸಂರಕ್ಷಿಸಿಡುವ ಬಗ್ಗೆ ಇಂಗ್ಲೆಂಡ್ ಸರಕಾರಕ್ಕೆ ಭರವಸೆ ನೀಡಲಾಗಿದೆ ಎಂದು ಗಾಯತ್ರಿ ಕುಮಾರ್ ತಿಳಿಸಿದ್ದಾರೆ.