ಪಂಜಾಬ್ ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಇಂದು ತಮ್ಮ ಹೊಸ ರಾಜಕೀಯ ಪಕ್ಷ ಘೋಷಣೆ ಮಾಡಿದ್ದಾರೆ. ಈ ಮೂಲಕ ದೇಶದಲ್ಲಿ ಮತ್ತೊಂದು ರಾಜಕೀಯ ಪಕ್ಷ ಉದಯವಾಗಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮರಿಂದರ್ ಸಿಂಗ್, ನಾನು ಹೊಸ ಪಕ್ಷವನ್ನು ಸ್ಥಾಫಿಸುತ್ತಿದ್ದೇನೆ. ಚುನಾವಣಾ ಆಯೋಗದಿಂದ ಸ್ಪಷ್ಟನೆ ಸಿಕ್ಕ ಬಳಿಕ ಹೊಸ ಪಕ್ಷದ ಹೆಸರು ಹಾಗೂ ಚಿಹ್ನೆಯನ್ನು ಘೋಷಿಸುತ್ತೇನೆ. ಈ ಸಂಬಂಧ ನಮ್ಮ ವಕೀಲರು ಕೆಲಸ ಮಾಡುತ್ತಿದ್ದಾರೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಪಂಜಾಬ್ ಸಿಎಂ ಆಗಿ ನಾನು ಸಾಧಿಸಿದ ಸಾಧನೆಗಳ ಪಟ್ಟಿ ಇಲ್ಲಿದೆ. ಅಧಿಕಾರ ವಹಿಸಿಕೊಳ್ಳುವ ಮುನ್ನ ಜನತೆಗೆ ನೀಡಿದ ಪ್ರಣಾಳಿಕೆ ಹಾಗೂ ಏನೆನೆಲ್ಲ ಸಾಧಿಸಿದ್ದೇನೆ ಎಂಬುದರ ಬಗ್ಗೆ ತಿಳಿಸುತ್ತೇನೆ.
ನಾನು 9.5 ವರ್ಷಗಳ ಕಾಲ ಪಂಜಾಬ್ ಗೃಹ ಸಚಿವನಾಗಿ ಸೇವೆ ಸಲ್ಲಿಸಿದ್ದೇನೆ. ಆದರೆ 1 ತಿಂಗಳು ಗೃಹ ಸಚಿವರಾಗಿ ಸೇವೆ ಸಲ್ಲಿಸಿದವರು ನನಗಿಂತ ಜಾಸ್ತಿ ತಿಳಿದವರಂತೆ ಮಾತನಾಡುತ್ತಾರೆ ಎಂದು ಹೇಳಿದ್ದಾರೆ.
ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಅವರ ಹಿತಾಸಕ್ತಿಗಾಗಿ ಪರಿಹರಿಸಿದರೆ 2022 ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಅವರು ರಾಜೀನಾಮೆ ನೀಡಿದ ನಂತರ, ಅಮರಿಂದರ್ ಸಿಂಗ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಮಾಡಿದ್ದರು.
ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ಪಂಜಾಬಿನಲ್ಲಿ ಭಾರೀ ರಾಜಕೀಯ ಬದಲಾವಣೆಗಳು ನಡೆಯುತ್ತಿವೆ. ಅಂತಃಕಲಹಗಳ ನಡುವೆ ಕಾಂಗ್ರೆಸ್, ದಲಿತ ಮುಖಂಡ ಚನ್ನಿ ಅವರನ್ನು ಹೊಸ ಮುಖ್ಯಮಂತ್ರಿಯಾಗಿ ನೇಮಿಸಿದೆ. ಮತ್ತೊಂದೆಡೆ, ಅಸಮಾಧಾನದಿಂದ ಕಾಂಗ್ರೆಸ್ ತೊರೆದಿರುವ ನಿಕಟಪೂರ್ವ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ತಮ್ಮದೇ ಹೊಸ ಪಕ್ಷ ಕಟ್ಟಲು ಮುಂದಾಗಿದ್ದಾರೆ.
ಇಂದು ಚಂಡೀಗಡದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿಂಗ್, ತಮ್ಮ ನೂತನ ಪಕ್ಷದ ಹೆಸರು ಮತ್ತು ಚಿಹ್ನೆಗಾಗಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು. ಜೊತೆಗೆ, ಚುನಾವಣೆಯಲ್ಲಿ ತಮ್ಮ ಪಕ್ಷವು ಬಿಜೆಪಿಯೊಂದಿಗೆ ಸೀಟು ಹಂಚಿಕೆ ಮಾಡಿಕೊಳ್ಳಲು ಸಿದ್ಧವಿದೆ. ಆದರೆ, ಅಕಾಲಿ ದಳದೊಂದಿಗೆ ಯಾವುದೇ ಹೊಂದಾಣಿಕೆಗೆ ಸಿದ್ಧವಿಲ್ಲ ಎಂದು ಘೋಷಿಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ಸಮರ್ಥಕರನ್ನು ಹೊಂದಿರುವ ಕ್ಯಾಪ್ಟನ್ ಸಿಂಗ್ ಬಿಜೆಪಿ ಕಡೆಗೆ ಒಲವು ತೋರಿರುವುದು ಕಾಂಗ್ರೆಸ್ನ ಚುನಾವಣಾ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ಅವರ ಹೊಸ ಪಕ್ಷವು ಪಂಜಾಬ್ ರಾಜಕೀಯದ ನಕ್ಷೆ ಬದಲಿಸಬಹುದು ಎಂಬ ನಿರೀಕ್ಷೆ ಇದೆ.
ಡ್ರೋನ್ ಡೇಂಜರ್: ರಾಜ್ಯದಲ್ಲಿ ಶಸ್ತ್ರಾಸ್ತ್ರಗಳನ್ನು ಮತ್ತು ಮಾದಕವಸ್ತುಗಳನ್ನು ಸಾಗಿಸಲು ಈ ಹಿಂದೆ ಡ್ರೋನ್ಗಳನ್ನು ಬಳಸಿದ್ದಾರೆ. ಇದೀಗ ಸ್ಫೋಟಕ ವಸ್ತುಗಳನ್ನು ಕಳುಹಿಸಲು ಕೂಡ ಡ್ರೋನ್ ಬಳಕೆ ನಡೆಯುತ್ತಿದೆ. ರಾಜ್ಯದ ಭದ್ರತೆಗೆ ಸವಾಲು ಎದುರಾಗಿದ್ದು, ನಾವು, ರಾಜಕಾರಣಿಗಳು ಪಂಜಾಬನ್ನು ರಕ್ಷಿಸಬೇಕಿದೆ ಎಂದು ಅಮರಿಂದರ್ ಸಿಂಗ್ ಹೇಳಿದರು.