ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಬಂಗ್ಲೆಗುಡ್ಡದಲ್ಲಿ ಸಿಕ್ಕಿರುವ ಅಸ್ಥಿಪಂಜರಗಳನ್ನು ಚೀಲಗಳಲ್ಲಿ ತುಂಬಿ ತರಲಾಗಿದ್ದು ಈ ಅಸ್ಥಿಪಂಜರಗಳು ಯಾರದ್ದು ಎನ್ನುವ ಪ್ರಶ್ನೆ ಎದುರಾಗಿದೆ.
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಒಂದು ಅಂತ್ಯ ಸಿಕ್ಕಿತು ಎನ್ನುವಾಗಲೇ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಬಂಗ್ಲೆಗುಡ್ಡದಲ್ಲಿ ಅಸ್ಥಿಪಂಜರಗಳಿವೆ ಎಂದು ಸೌಜನ್ಯ ಮಾವ ವಿಠಲ ಗೌಡ ಹೇಳಿದ್ದರು. ಈ ಹಿನ್ನಲೆಯಲ್ಲಿ ಮತ್ತೆ ಅಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.
ನಿನ್ನೆ ಮೊದಲ ದಿನವೇ ಐದು ಕಡೆ ಮೂಳೆಗಳಿ, ತಲೆಬುರುಡೆಗಳು ಸಿಕ್ಕಿವೆ. ಇದನ್ನೀಗ ಎಫ್ ಎಸ್ಎಲ್ ವರದಿಗೆ ಕಳುಹಿಸಲಾಗಿದೆ. ಇಲ್ಲಿ ಭೂಮಿಯ ಮೇಲ್ಭಾಗದಲ್ಲೇ ಅಸ್ಥಿಪಂಜರಗಳು ಪತ್ತೆಯಾಗಿವೆ. ಆತ್ಮಹತ್ಯೆ ಮಾಡಲು ಕಟ್ಟಿರುವ ರೀತಿಯಲ್ಲಿ ಸೀರೆಯ ಅವಶೇಷಗಳೂ ಸಿಕ್ಕಿವೆ. ಜೊತೆಗೆ ಹಿರಿಯ ನಾಗರಿಕರ ಕಾರ್ಡ್, ವಾಕರ್ ಕೂಡಾ ಸಿಕ್ಕಿವೆ.
ಹೀಗಾಗಿ ಮೇಲ್ನೋಟಕ್ಕೆ ಇವುಗಳನ್ನೆಲ್ಲಾ ಗಮನಿಸಿದರೆ ಧರ್ಮಸ್ಥಳ ಪುಣ್ಯಭೂಮಿಗೇ ಬಂದು ಪ್ರಾಣ ಬಿಡಬೇಕು ಎನ್ನುವ ದೃಷ್ಟಿಯಿಂದಲೇ ಇಲ್ಲಿಗೆ ಬಂದು ಆತ್ಮಹತ್ಯೆ ಮಾಡಿರಬಹುದು ಎನ್ನುವಂತಿದೆ. ಇದನ್ನು ಸ್ಥಳೀಯರೇ ಹೇಳುತ್ತಿದ್ದಾರೆ. ಈ ಹಿಂದೆ ಇಲ್ಲಿಗೆ ಸಾಕಷ್ಟು ಜನ ಬಂದು ಆತ್ಮಹತ್ಯೆ ಮಾಡುತ್ತಿದ್ದರು ಎನ್ನುತ್ತಿದ್ದಾರೆ. ಹೀಗಾಗಿ ಇವುಗಳೆಲ್ಲವೂ ಆತ್ಮಹತ್ಯೆಯ ಕುರುಹುಗಳೇ ಅಥವಾ ಯಾರಾದರೂ ಕೊಲೆ ಮಾಡಿ ಇಲ್ಲಿ ತಂದು ಹಾಕುತ್ತಿದ್ದರೇ ಎನ್ನುವುದು ತನಿಖೆಯಿಂದ ಬಯಲಾಗಬೇಕಿದೆ.