Select Your Language

Notifications

webdunia
webdunia
webdunia
webdunia

ಮತ್ತೊಂದು ರಥಯಾತ್ರೆ, ಮಾಜಿ ಸಿಎಂ ಎಚ್‌ಡಿಕೆ ಘೋಷಣೆ!

ಮತ್ತೊಂದು ರಥಯಾತ್ರೆ, ಮಾಜಿ ಸಿಎಂ ಎಚ್‌ಡಿಕೆ ಘೋಷಣೆ!
ಬೆಂಗಳೂರು , ಶನಿವಾರ, 14 ಮೇ 2022 (09:25 IST)
ಬೆಂಗಳೂರು: ಜೆಡಿಎಸ್‌ ಪಕ್ಷದ ಮಹತ್ವಾಕಾಂಕ್ಷೆ ಜನತಾ ಜಲಧಾರೆ ಕಾರ್ಯಕ್ರಮ ಯಶಸ್ವಿಯಾದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮುಂದಿನ ಜೂನ್‌-ಜುಲೈ ತಿಂಗಳಲ್ಲಿ ಮತ್ತೊಂದು ರಥಯಾತ್ರೆ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ. ಅಲ್ಲದೆ, ನೀರಾವರಿ ಯೋಜನೆಗಳನ್ನು ಜಾರಿಗೊಳಿಸುವ ವಿಚಾರದಲ್ಲಿ ನುಡಿದಂತೆ ನಡೆಯದಿದ್ದರೆ ಯಾವುದೇ ಕಾರಣಕ್ಕೂ ಜೆಡಿಎಸ್‌ ಪಕ್ಷ ಜನರ ಮುಂದೆ ಮತ ಕೇಳಲು ಬರುವುದಿಲ್ಲ ಎಂದೂ ಅವರು ವಾಗ್ದಾನ ಮಾಡಿದ್ದಾರೆ.
 
ಶುಕ್ರವಾರ ನೆಲಮಂಗಲ ಬಳಿಯ ಬೃಹತ್‌ ಮೈದಾನದಲ್ಲಿ ಆಯೋಜಿಸಿದ ಜನತಾ ಜಲಧಾರೆ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಜನರ ಸಮಸ್ಯೆಗೆ ಪರಿಹಾರ ರೂಪಿಸುವ ಕೆಲಸ ಮಾಡಲಾಗುವುದು. ರಾಜ್ಯದ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿದ್ದೇನೆ. 
 
ನಾಡಿನ ಬಡವರ ಬದುಕು ಕಟ್ಟಲು ಶ್ರಮಿಸುತ್ತೇನೆ. ಜೂನ್‌-ಜುಲೈ ತಿಂಗಳಲ್ಲಿ ಮತ್ತೊಂದು ರಥಯಾತ್ರೆ ಕೈಗೊಂಡು ಮೂರು ತಿಂಗಳ ಕಾಲ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುತ್ತೇನೆ. 224 ಕ್ಷೇತ್ರಗಳಿಗೆ ಖುದ್ದು ನಾನೇ ಭೇಟಿ ನೀಡಿ ಜನತೆಗೆ ಪಕ್ಷದ ತೀರ್ಮಾನಗಳನ್ನು ಮುಟ್ಟಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
 
ಜನರ ಹೃದಯದಲ್ಲಿ ಸ್ಥಾನ ಪಡೆಯಬೇಕೆಂಬ ಹಂಬಲ ಹೊಂದಿದ್ದು, ಅದೇ ನನ್ನ ಆಸ್ತಿ ಎಂಬುದಾಗಿ ಭಾವಿಸಿದ್ದೇನೆ. ನೀರಾವರಿ, ಶಿಕ್ಷಣ, ಆರೋಗ್ಯ ಕ್ಷೇತ್ರದ ಅಭಿವೃದ್ಧಿಯ ಜತೆಗೆ ರೈತರು ಸಾಲಗಾರರಾಗದಂತೆ ಬದುಕು ನಿರ್ವಹಣೆ ಮಾಡಲು, ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡುವುದು, ಪ್ರತಿ ಕುಟುಂಬಕ್ಕೆ ವಸತಿ ಕಲ್ಪಿಸುವ ಗುರಿಯನ್ನು ಹೊಂದಲಾಗಿದೆ. ಇದಕ್ಕೆ ಜನರ ಆರ್ಶೀವಾದ ಬೇಕು. 
 
ಮುಂದಿನ ಎಂಟು ತಿಂಗಳು ನನಗೆ ಸಹಕಾರ ನೀಡಿದರೆ 123 ಗುರಿಯನ್ನು ಮುಟ್ಟುತ್ತೇವೆ. ದಲಿತ, ಕುರುಬ ಸೇರಿದಂತೆ ಎಲ್ಲಾ ಹಿಂದುಳಿದ ವರ್ಗ, ಮುಸ್ಲಿಂ, ಕ್ರೈಸ್ತ ಹಾಗೂ ಇತರೆ ಎಲ್ಲಾ ಸಮಾಜದವರ ವಿಶ್ವಾಸಕ್ಕೆ ತೆಗೆದುಕೊಂಡು ಸರ್ವಜನಾಂಗದ ಶಾಂತಿಯ ತೋಟ ನಿರ್ಮಿಸುವ ಕೆಲಸ ಮಾಡಲಾಗುವುದು. ಶಾಶ್ವತವಾಗಿ ಶಾಂತಿಯುತ ಬದುಕುವಂತಹ ಪರಿಸ್ಥಿತಿ ನಿರ್ಮಿಸಲಾಗುವುದು. ಜನಪರ ಸರ್ಕಾರ ತರುವ ಸವಾಲು ಇಟ್ಟುಕೊಂಡು ಮತದಾರರ ಬಳಿ ಹೋಗುತ್ತೇನೆ. ಒಂದು ವೇಳೆ ನೀಡಿರುವ ಮಾತಿನಂತೆ ನಡೆದುಕೊಳ್ಳದಿದ್ದರೆ ಪಕ್ಷವು ಮತ್ತೆ ಜನರ ಬಳಿ ಹೋಗಿ ಮತ ಕೇಳುವುದಿಲ್ಲ ಎಂದು ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮೇ.16ರಿಂದ ಶಾಲೆ ಆರಂಭ, ಸಕಲ ಸಿದ್ಧತೆಗೆ ಸೂಚನೆ!