ಅನಂತ ಕುಮಾರ್ ಕೊನೆಯ ದಿನಗಳು ಹೇಗಿತ್ತು ಗೊತ್ತಾ?!

ಸೋಮವಾರ, 12 ನವೆಂಬರ್ 2018 (10:06 IST)
ಬೆಂಗಳೂರು: ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕೇಂದ್ರ ಸಚಿವ ಅನಂತ ಕುಮಾರ್ ವಿಧಿವಶರಾಗಿದ್ದಾರೆ. ಆದರೆ ಅವರ ಅನಾರೋಗ್ಯ ಬಗ್ಗೆ ಹೊರ ಜಗತ್ತಿಗೆ ಹೆಚ್ಚೇನೂ ಮಾಹಿತಿಯಿರಲಿಲ್ಲ.

ಕೆಲವು ದಿನಗಳ ಹಿಂದಷ್ಟೇ ಅವರು ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದರು ಎನ್ನುವ ವಿಚಾರ ಹೊರ ಜಗತ್ತಿಗೆ ಗೊತ್ತಾಗಿತ್ತಷ್ಟೇ. ಸಾರ್ವಜನಿಕರಿಗೆ ಮಾತ್ರವಲ್ಲ, ಬಿಜೆಪಿ ನಾಯಕರಿಗೇ ಅವರ ಅನಾರೋಗ್ಯದ ವಿಚಾರ ಗೊತ್ತಾಗಿದ್ದು ತಡವಾಗಿ.

ಶಂಕರ್ ಆಸ್ಪತ್ರೆಯಲ್ಲಿ ಅನಂತ ಕುಮಾರ್ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಗ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಬೇರೆ ಬೇರೆ ರಾಜಕೀಯ ಪಕ್ಷಗಳ ಆತ್ಮೀಯರು ಅವರನ್ನು ನೋಡಲು ಆಸ್ಪತ್ರೆಗೆ ಬಂದು ಹೋಗುತ್ತಿದ್ದರು.

ಆದರೆ ರಾಜ್ಯದ ಅವರ ಆತ್ಮೀಯ ಬಳಗದಲ್ಲಿದ್ದ ಪ್ರಹ್ಲಾದ್ ಜೋಶಿ, ಯಡಿಯೂರಪ್ಪ, ಆರ್ ಅಶೋಕ್, ವಿ ಸೋಮಣ್ಣ ಸೇರಿದಂತೆ ಯಾರಿಗೂ ಅವರನ್ನು ನೇರವಾಗಿ ಭೇಟಿಯಾಗಿ ಮಾತನಾಡುವ ಅವಕಾಶ ಸಿಗಲಿಲ್ಲ. ಆಗಲೇ ಅವರ ಸ್ಥಿತಿ ಗಂಭೀರವಾಗಿತ್ತು. ಅನಂತ ಕುಮಾರ್ ಆಗಲೇ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ ಎನ್ನಲಾಗಿದೆ.

ಹಾಗಿದ್ದರೂ ಅವರು ಚೇತರಿಸಿಕೊಳ್ಳುತ್ತಾರೆ ಎಂಬ ಆಶ್ವಾಸನೆಯನ್ನು ಅವರನ್ನು ನೋಡಿಕೊಳ್ಳುತ್ತಿದ್ದ ಶಂಕರ್ ಆಸ್ಪತ್ರೆ ಮುಖ್ಯಸ್ಥ ಡಾ. ಶ್ರೀನಾಥ್ ನೀಡಿದ್ದರು ಎನ್ನಲಾಗಿದೆ. ಇಂತಹ ಕಷ್ಟದ ಸಂದರ್ಭದಲ್ಲಿಯೂ ಅನಂತ ಕುಮಾರ್ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರ ಎನ್ ಜಿಒ ಸಂಸ್ಥೆ ಮೂಲಕ ಸಾವಿರಾರು ಮಕ್ಕಳಿಗೆ ಅನ್ನದಾನ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದರು ಎಂದು ಬಿಜೆಪಿ ನಾಯಕ ಸೋಮಣ್ಣ ಸ್ಮರಿಸಿಕೊಂಡಿದ್ದಾರೆ.

ಮೊನ್ನೆಯಷ್ಟೇ ಅನಂತ ಕುಮಾರ್ ರನ್ನು ದೂರದಿಂದಲೇ ನೋಡಿಕೊಂಡು ಬಂದಿದ್ದ ನಾಯಕರಿಗೂ ಅವರು ಇಷ್ಟು ಬೇಗ ಅಗಲಿದ್ದಾರೆ ಎನ್ನುವುದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅತ್ಯಾಚಾರ ಮಾಡಲು ವಿಫಲವಾಗಿದ್ದಕ್ಕೆ 75 ವರ್ಷದ ವೃದ್ಧೆಗೆ ಯುವಕ ಮಾಡಿದ್ದೇನು ಗೊತ್ತಾ?