Select Your Language

Notifications

webdunia
webdunia
webdunia
webdunia

ಸಚಿವ ಜಮೀರ್‌ ಕ್ಷೇತ್ರದಲ್ಲಿ ಇದೆಂತಾ ವಿಕೃತಿ: ಗೋಮಾತೆಯ ಕೆಚ್ಚಲನ್ನು ಕೊಯ್ದ ದುರುಳರು

Minister Jameer Ahmed

Sampriya

ಬೆಂಗಳೂರು , ಭಾನುವಾರ, 12 ಜನವರಿ 2025 (14:05 IST)
Photo Courtesy X
ಬೆಂಗಳೂರು: ನಗರದ ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ಕಿಡಿಗೇಡಿಗಳು ಮೂರು ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ಘಟನೆ ಇಂದು ಬೆಳಗ್ಗೆ ನಡೆದಿದೆ. ರಸ್ತೆಬದಿ ಶೆಡ್‌ನಲ್ಲಿ ಮಲಗಿದ್ದ ಮೂರು ಹಸುಗಳ ಕೆಚ್ಚಲುಗಳನ್ನು ಕೊಯ್ದಿದ್ದು, ಮೂಕರೋಧನೆ ಅನುಭವಿಸುತ್ತಿದ್ದ ಹಸುಗಳಿಗೆ ಚಾಮರಾಜಪೇಟೆಯ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ವಿಷಯ ತಿಳಿಯುತ್ತಿದ್ದಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಮುಖಂಡರು ಘಟನಾ ಸ್ಥಳದಲ್ಲಿ ಜಮಾಯಿಸಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳದಲ್ಲಿ ಕೆಎಸ್ಆರ್​ಪಿ ತುಕಡಿ ನಿಯೋಜಿಸಲಾಗಿದೆ.

ಕಾಟನ್‌ಪೇಟೆ ಠಾಣೆ ಪೊಲೀಸ್ ಸಿಬ್ಬಂದಿ, ಚಿಕ್ಕಪೇಟೆ ಉಪವಿಭಾಗದ ಎಸಿಪಿ ನೇತೃತ್ವದಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಪ್ರತಿಪಕ್ಷದ ನಾಯಕ ಆರ್.ಅಶೋಕ್, ಸಂಸದ ಪಿ.ಸಿ‌.ಮೋಹನ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
ಸಂಸದ ಪಿ.ಸಿ. ಮೋಹನ್‌ ಮಾತನಾಡಿ, ಇದೊಂದು ಅಮಾನವೀಯ ಕೃತ್ಯ. ಗೋವುಗಳನ್ನ ದೇವರು ಎಂದು ಪೂಜೆ ಮಾಡುತ್ತೇವೆ. ಆದರೆ, ಕಿಡಿಗೇಡಿಗಳು ಗೋವುಗಳ ಕೆಚ್ಚಲು ಕೊಯ್ದು ದುಷ್ಕೃತ್ಯ ಎಸಗಿದ್ದಾರೆ. ಕೂಡಲೇ ಕಿಡಿಗೇಡಿಗಳ ಬಂಧನವಾಗಬೇಕು. ಈ ಸರ್ಕಾರ ಬಂದ ಮೇಲೆ ಇದೆಲ್ಲಾ ಆಗುತ್ತಿದೆ. ಕಿಡಿಗೇಡಿಗಳ ಬಂಧನವಾಗುವವರೆಗೆ ಹೋರಾಟ ನಿಲುವುದಿಲ್ಲ ಎಂದು ಹೇಳಿದ್ದಾರೆ.

ಪೊಲೀಸರ ಜೊತೆ ಮಾತಾನಾಡಿದ್ದೇನೆ. ಇಲ್ಲಿ ಸಿಸಿಟಿವಿಗಳು ಇಲ್ಲ. ಸಿಸಿಟಿವಿ ಹಾಕಿದರೆ ಕಿತ್ತು ಹಾಕುತ್ತಾರೆ. ಇದೀಗ ನನ್ನ ಎಂಪಿ ಫಂಡ್‌ ನಿಂದ ಸಿಸಿಟಿವಿ ಹಾಕೋಕೆ ವ್ಯವಸ್ಥೆ ಮಾಡುತ್ತೇನೆಂದು ತಿಳಿಸಿದರು.

ಘಟನೆಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ತೀವ್ರವಾಗಿ ಕಿಡಿಕಾರಿದ್ದು, ಹಸುಗಳ ಮಾಲೀಕನಿಗೆ ರೂ.1 ಲಕ್ಷ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.

ಈ ನಡುವೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಲ್ಕು ಹಸುವಿನ ಕೆಚ್ಚಲನ್ನು ಕೊಯ್ದ ನೀಚಕರು: ಸಚಿವ ಜಮೀರ್‌ ವಿರುದ್ಧ ಮುಗಿಬಿದ್ದ ಮುತಾಲಿಕ್‌