ಪಾಂಡವಪುರ ತಾಲ್ಲೂಕಿನ ಮೇಲುಕೋಟೆಯಲ್ಲಿ ಐತಿಹಾಸಿಕ ವೈರಮುಡಿ ಉತ್ಸವ ಇಂದಿನಿಂದ ಆರಂಭವಾಗಲಿದೆ. ವೈರಮುಡಿ (Vairamudi Utsava) ಕೊಂಡೊಯ್ಯಲು ವಾಡಿಕೆಯಂತೆ ಮುಂಜಾನೆಯೇ ಜಿಲ್ಲಾ ಖಜಾನೆಗೆ ಬರಬೇಕಿದ್ದ ವಾಹನ ಈವರೆಗೂ ಬಂದಿಲ್ಲ. ಬೆಳಿಗ್ಗೆ 7 ಗಂಟೆಗೇ ವೈರಮುಡಿ ಮತ್ತು ಆಭರಣಗಳನ್ನು ಖಜಾನೆಯಿಂದ ಮೇಲುಕೋಟೆಗೆ ಕಳುಹಿಸುವುದು ವಾಡಿಕೆ. ಆದರೆ 8 ಗಂಟೆ ದಾಟಿದ್ದರೂ ಮಂಡ್ಯಕ್ಕೆ ಬಾರದ ವಾಹನ ಬಂದಿರಲಿಲ್ಲ. ವೈರಮುಡಿಗೆ ಪೂಜೆ ಸಲ್ಲಿಸುವ ಸಂಪ್ರದಾಯಗಳಿರುವ ಕುಟುಂಬಗಳ ಸದಸ್ಯರು ಮತ್ತು ಸರ್ಕಾರದ ಪರವಾಗಿ ಹಾಜರಿರುವ ಅಧಿಕಾರಿಗಳು ಮಂಡ್ಯದಲ್ಲಿಯೇ ಕಾದು ಕುಳಿತಿದ್ದಾರೆ. ಮೇಲುಕೋಟೆಯಲ್ಲೇ ವಾಹನಕ್ಕೆ ಸ್ಥಾನಿಕರು ಅಡ್ಡಿಪಡಿಸಿದ್ದಾರೆ. ವೈರಮುಡಿ ಕೊಂಡೊಯ್ಯಲು ಅವಕಾಶ ನೀಡಬೇಕೆಂದು 4ನೇ ಸ್ಥಾನಿಕ ಕುಟುಂಬ ಮೇಲುಕೋಟೆಯಲ್ಲಿ ಅಡ್ಡಿಪಡಿಸಿದೆ. ರೂಢಿಯಂತೆ ಈ ಬಾರಿ 1ನೇ ಸ್ಥಾನಿಕರು ವೈರಮುಡಿ ತರುವ ಉಸ್ತುವಾರಿ ಹೊತ್ತಿದ್ದರು. ಕಳೆದ ಬಾರಿ ನಮಗೆ ಅವಕಾಶ ನೀಡಬೇಕು ಎಂದು ಕೋರ್ಟ್ ಆದೇಶಿಸಿತ್ತು ಎಂದು 4ನೇ ಸ್ಥಾನಿಕರು ವಾದಿಸುತ್ತಿದ್ದ ಗೊಂದಲದ ವಾತಾವರಣ ನಿರ್ಮಾಣವಾಗಿದೆ.
ಐತಿಹಾಸಿಕ ವೈರಮುಡಿ ಉತ್ಸವದ ಹಿನ್ನೆಲೆಯಲ್ಲಿ ಮೇಲುಕೋಟೆ ಪಟ್ಟಣ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ. ಸಂಪ್ರದಾಯದಂತೆ ಚೆಲುವನಾರಾಯಣಸ್ವಾಮಿಗೆ ಕಿರೀಟಧಾರಣೆ ಮಾಡಿ, ರಾತ್ರಿ 8ಕ್ಕೆ ಪ್ರಮುಖ ಬೀದಿಗಳಲ್ಲಿ ವೈರಮುಡಿ ಬ್ರಹ್ಮೋತ್ಸವ ನಡೆಯಲಿದೆ. ಉತ್ಸವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಳ್ಳಲಿದ್ದಾರೆ. ಮಂಡ್ಯದ ಜಿಲ್ಲಾ ಖಜಾನೆಯಿಂದ ರಾಜಮುಡಿ ತಿರುವಾಭರಣ ಪೆಟ್ಟಿಗೆಯನ್ನು ಪೊಲೀಸ್ ಭದ್ರತೆಯನ್ನು ಮೇಲುಕೋಟೆಗೆ ಕೊಂಡೊಯ್ಯಲಾಗುವುದು. ಉತ್ಸವ ಹಿನ್ನೆಲೆಯಲ್ಲಿ ಮೇಲುಕೋಟೆಯ ಬೀದಿಬೀದಿಗಳಿಗೆ ದೀಪಾಲಂಕಾರ ಮಾಡಲಾಗಿದೆ. ಚಲುವನಾರಾಯಣಸ್ವಾಮಿ ದೇಗುಲ, ನರಸಿಂಹಸ್ವಾಮಿ ದೇಗುಲ ಹಾಗೂ ಕಲ್ಯಾಣಿಗಳು ವಿದ್ಯುತ್ ದೀಪಾಲಂಕಾರದಿಂದ ಹೊಳೆಯುತ್ತಿವೆ.ಹೀಗೆ ನಡೆಯಲಿದೆ ಉತ್ಸವ
ಮೊದಲಿಗೆ ಗರುಡನಿಗೆ ಪೂಜೆ ಸಲ್ಲಿಸಿ ಮೇಲುಕೋಟೆ ಗ್ರಾಮದ ಸುತ್ತಲೂ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ಮೂರನೆಯ ದಿನ ಕಲ್ಯಾಣೋತ್ಸವ, ನಾಲ್ಕನೆಯ ದಿನ ವಸಂತೋಧ್ಯಾನ ಮತ್ತಿತರ ಮಂಟಪಗಳಿಗೆ ಚೆಲುವನಾರಾಯಣಸ್ವಾಮಿಯ ಮೆರವಣಿಗೆ ಹೋಗುತ್ತದೆ. ಬ್ರಹ್ಮೋತ್ಸವದ ಬಹುಮುಖ್ಯ ದಿನವೇ ವೈರಮುಡಿ ಉತ್ಸವ. ಅಂದು ವೈರಮುಡಿ, ರಾಜ ಒಡೆಯರು ಕೊಟ್ಟಿರುವ ರಾಜಮುಡಿ, ಮುಮ್ಮಡಿ ಕೃಷ್ಣರಾಜ ಒಡೆಯರು ನೀಡಿರುವ ಕೃಷ್ಣಮುಡಿ ಮತ್ತು ರಾಜ ಪರಂಪರೆಯಿಂದ ಬಂದಿರುವ ನವರತ್ನ ಖಚಿತ ಪದ್ಮಪೀಠ, ಅರಳೆಲೆ ಪದಕ, ಮುತ್ತುರತ್ನಗಳ ಕರ್ಣಕುಂಡಲಗಳು, ಮುತ್ತಿನ ಮಣಿಕಟ್ಟು, ಗಂಡಭೇರುಂಡದ ವಜ್ರಾಹಾರ, ಮುತ್ತು ಮತ್ತು ಪಚ್ಚೆ ಕಲ್ಲಿನ ಕೂರಂಬ, ಶಂಖ, ಚಕ್ರ, ಗದೆ ಸೇರಿದಂತೆ ಬೆಲೆ ಕಟ್ಟಲಾಗದ ಅತ್ಯಮೂಲ್ಯ, ಅತ್ಯಪೂರ್ವ 24 ಆಭರಣಗಳನ್ನು ಭದ್ರತೆಯೊಡನೆ ಜಿಲ್ಲಾ ಖಜಾನೆಯಿಂದ ವಿಶೇಷ ಪೆಟ್ಟಿಗೆಯಲ್ಲಿ ತಂದು ಶ್ರೀ ರಾಮಾನುಜರ ಗುಡಿಯಲ್ಲಿ ಇಡುತ್ತಾರೆ.
ಅಂದು ಸಂಜೆಯ ಶುಭ ಮುಹೂರ್ತದಲ್ಲಿ ಪ್ರಧಾನ ಅರ್ಚಕರು ತಮ್ಮ ಕಣ್ಣಿಗೆ ರೇಷ್ಮೆ ವಸ್ತ್ರ ಕಟ್ಟಿಕೊಂಡು ವೈರಮುಡಿಯನ್ನು ಪೆಟ್ಟಿಗೆಯಿಂದ ಹೊರತೆಗೆದು ಶ್ರೀ ಚಲುವನಾರಾಯಣ ಸ್ವಾಮಿಯ ಶಿರದ ಮೇಲಿಟ್ಟು ಇತರ ಆಭರಣಗಳಿಂದ ಅಲಂಕರಿಸುತ್ತಾರೆ. ನಂತರ ಉತ್ಸವ ಹೊರಡುತ್ತದೆ. ಭಕ್ತರ ಪಾಲಿಗಂತೂ ಅದು ಸಾಕ್ಷಾತ್ ವೈಕುಂಠವೇ ಧರೆಗಿಳಿದಂತೆ. ಹೀಗೆ ಆರಂಭವಾಗುವ ವೈರಮುಡಿ ಬ್ರಹ್ಮೋತ್ಸವ ರಾತ್ರಿ ಸುಮಾರು 9 ಗಂಟೆಯಿಂದ ಬೆಳಗಿನ ಜಾವ 3 ಗಂಟೆವರೆಗೂ ಜರುಗುತ್ತದೆ.
ಕಣ್ಣು ಕೋರೈಸುವ ಈ ವಜ್ರ ಕಿರೀಟವನ್ನು ಕಣ್ಣಿನಿಂದ ನೋಡಿ ಧನ್ಯರಾಗಬಹುದೇ ಹೊರತು ಯಾರೂ ಇದನ್ನು ಕೈಯಲ್ಲಿ ಮುಟ್ಟಬಾರದೆಂಬ ನಂಬಿಕೆ ಇಲ್ಲಿನದು. ಸಾಕ್ಷಾತ್ ಆದಿಶೇಷನೇ ವೈರಮುಡಿ ಎಂಬ ನಂಬಿಕೆಯೇ ಇದಕ್ಕೆ ಕಾರಣ. ಒಂದು ಕಾಲದಲ್ಲಿ ಈ ವಜ್ರಮಯ ವೈರಮುಡಿ ದೆಹಲಿ ಸುಲ್ತಾನರ ಕೈವಶವಾಗಿತ್ತು. ಆಚಾರ್ಯ ಶ್ರೀರಾಮಾನುಜರೇ ಇದನ್ನು ದೆಹಲಿಯಿಂದ, ಮೂಲ ವಿಗ್ರಹದೊಂದಿಗೆ ಇಲ್ಲಿಗೆ ತಂದರೆಂದು ಹೇಳಲಾಗುತ್ತದೆ. ನಂತರ ವೈರಮುಡಿಯನ್ನು ಮೈಸೂರು ಅರಸರ ವಶಕ್ಕೆ ಒಪ್ಪಿಸಲಾಗಿತ್ತು. ಮುಂದೆ ಮಂಡ್ಯ ಜಿಲ್ಲಾ ಖಜಾನೆಯಲ್ಲಿ ವಿಶೇಷ ಭದ್ರತೆಯಲ್ಲಿ ಇದನ್ನು ಇಡುತ್ತ ಬರಲಾಗುತ್ತಿದೆ. ಆದಿಶೇಷನ ಅವತಾರಿ ಆಚಾರ್ಯ ಶ್ರೀರಾಮಾನುಜರು ಆರಂಭಿಸಿದ ವೈರಮುಡಿ ಉತ್ಸವ ಪ್ರತಿ ವರ್ಷ ಅದೇ ಮುಹೂರ್ತದಲ್ಲಿ ಮೇಲುಕೋಟೆಯಲ್ಲಿ ಸಾಂಗವಾಗಿ ನಡೆಯುತ್ತಾ ಬಂದಿದೆ.