Select Your Language

Notifications

webdunia
webdunia
webdunia
webdunia

ಕೋವಿಡ್-19 ಕಾರಣ ಉಂಟಾಗಿರುವ ಕಲಿಕೆ ಹಿನ್ನಡೆ ಸರಿದೂಗಿಸಲು ಶಿಕ್ಷಣ ಇಲಾಖೆಯಿಂದ ಪ್ರಯತ್ನ

ಕೋವಿಡ್-19 ಕಾರಣ ಉಂಟಾಗಿರುವ ಕಲಿಕೆ ಹಿನ್ನಡೆ ಸರಿದೂಗಿಸಲು ಶಿಕ್ಷಣ ಇಲಾಖೆಯಿಂದ  ಪ್ರಯತ್ನ
bangalore , ಶುಕ್ರವಾರ, 8 ಏಪ್ರಿಲ್ 2022 (19:53 IST)
ಕೋವಿಡ್-19 ಸೋಂಕಿನ ಕಾರಣ ಮಕ್ಕಳಲ್ಲಿ ಉಂಟಾಗಿರುವ ಕಲಿಕಾ ಹಿನ್ನಡೆ ಸರಿದೂಗಿಸಲು ಹಮ್ಮಿಕೊಂಡಿರುವ ‘ಕಲಿಕಾ ಚೇತರಿಕೆ’ ಕಾರ್ಯಕ್ರಮದ ಮೂಲಕ ಮಕ್ಕಳ ಕಲಿಕೆ ಸರಿದೂಗಿಸುವ ಪ್ರಯತ್ನದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ. ನಾಗೇಶ್ ಹೇಳಿದರು.
 
ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ‘ಕಲಿಕಾ ಚೇತರಿಕೆ’ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಕರ ಸಂಘ ಹಾಗೂ ಶಿಕ್ಷಣ ಅಧಿಕಾರಿಗಳ ಸಂಘದ ಪ್ರತಿನಿಧಿಗಳನ್ನು ಉದ್ದೇಶಿಸಿ ಸಚಿವ ನಾಗೇಶ್ ಅವರು ಮಾತನಾಡಿದರು.
 
‘ಕೋವಿಡ್-19 ಸೋಂಕಿನಿಂದ ಶಿಕ್ಷಣ ಕ್ಷೇತ್ರಕ್ಕೆ ಅತಿ ಹೆಚ್ಚು ನಷ್ಟವಾಗಿದೆ. ಶೈಕ್ಷಣಿಕ ಜೀವನದ ಎರಡು ಅಮೂಲ್ಯ ವರ್ಷಗಳನ್ನು ಮಕ್ಕಳು ಕಳೆದುಕೊಂಡಿದ್ದಾರೆ. ಕಳೆದುಕೊಂಡಿರುವುದನ್ನು ಸರಿದೂಗಿಸುವುದು ಅಷ್ಟು ಸುಲಭವಲ್ಲ. ಹಾಗೆಯೇ ಸರಿದೂಗಿಸುವುದು ಅಸಾಧ್ಯವೇನು ಅಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಯೋಜಿಸಿ ‘ಕಲಿಕಾ ಚೇತರಿಕೆ’ ಕಾರ್ಯಕ್ರಮವನ್ನು ರೂಪಿಸಿದೆ. 2022-23ನೇ ಸಾಲಿನ ಶೈಕ್ಷಣಿಕ ವರ್ಷವನ್ನು ‘ಕಲಿಕಾ ಚೇತರಿಕೆ’ ವರ್ಷವೆಂದು ಘೋಷಿಸಲಾಗಿದೆ’ ಎಂದು ಸಚಿವ ನಾಗೇಶ್ ತಿಳಿಸಿದರು.
 
‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಡೆಸಿದ ಸಮೀಕ್ಷೆಯಲ್ಲಿ ಮಕ್ಕಳ ಕಲಿಕೆಯಲ್ಲಿ ಹೆಚ್ಚು ಹಿನ್ನಡೆಯಾಗಿರುವುದು ಈಗಾಗಲೇ ಬಹಿರಂಗವಾಗಿದೆ. ಅಲ್ಲದೇ ಮಕ್ಕಳ ಪಾಲಕರು, ಶಿಕ್ಷಕರಿಗೂ ಅದರ ಬಗ್ಗೆ ತಿಳಿದಿದೆ. ಹೀಗಾಗಿ, ಕಲಿಕಾ ಹಿನ್ನಡೆ ಸರಿದೂಗಿಸುವ ಶಿಕ್ಷಣ ಇಲಾಖೆಯ ಈ ಪ್ರಯತ್ನದಲ್ಲಿ ಶಿಕ್ಷಕರು ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಅಗತ್ಯವಾಗಿದೆ. ಶಿಕ್ಷಕರು ಈ ಶೈಕ್ಷಣಿಕ ವರ್ಷವನ್ನು ವಿಶೇಷ ಮತ್ತು ಅತ್ಯಂತ ಮುಖ್ಯವಾದ ವರ್ಷವೆಂದು ಪರಿಗಣಿಸಿ ವಿಶೇಷ ಆಸಕ್ತಿಯಿಂದ ಬೋಧನೆಯಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಸಚಿವರು ಕರೆ ನೀಡಿದರು.
 
ಈ ಬಾರಿ ಶೈಕ್ಷಣಿಕ ವರ್ಷ ಎಂದಿಗಿಂತ 2 ವಾರ ಮುಂಚಿತವಾಗಿ ಪ್ರಾರಂಭವಾಗುತ್ತಿದೆ. ವಿವಿಧ ಜಿಲ್ಲೆಗಳ ಪ್ರವಾಸದ ಸಂದರ್ಭದಲ್ಲಿ ಶಿಕ್ಷಕರ ಅಭಿಪ್ರಾಯ ಕೇಳಿದಾಗ, 'ಈ ಬಾರಿಯ ಶೈಕ್ಷಣಿಕ ವರ್ಷವನ್ನು ಬೇಗ ಆರಂಭಿಸಿ, ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ನಾವೆಲ್ಲ ಸಿದ್ದರಾಗಿದ್ದೇವೆ ಎಂದು ಹೇಳಿದಾಗ ನನಗೆ ಅತ್ಯಂತ ಖುಷಿಯಾಗಿದೆ. ಮಕ್ಕಳ ಶಿಕ್ಷಣದ ಬಗ್ಗೆ ಶಿಕ್ಷಕರಿಗಿರುವ ಆಸಕ್ತಿ ಅಭಿನಂದನಾರ್ಹ’ ಎಂದು ಶಿಕ್ಷಕರ ಉತ್ಸಾಹದ ಕುರಿತು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
 
‘ಕಲಿಕಾ ಹಿನ್ನಡೆ ಸರಿದೂಗಿಸಿಕೊಳ್ಳುವ ಸಾಮರ್ಥ್ಯ ಮಕ್ಕಳಿಗೆ ಇರುತ್ತದೆ. ಆದರೆ, ಪ್ರತಿಯೊಂದು ಮಗುವಿನ ಕಲಿಕಾ ಮಟ್ಟ ಭಿನ್ನವಾಗಿರುತ್ತದೆ. ಅವರ ವಾಸದ ಸ್ಥಳ, ಶಾಲೆ ಸೇರಿದಂತೆ ಹತ್ತು ಹಲವು ವಿಚಾರಗಳು ಕಲಿಕೆಯ ಮೇಲೆ ಪರಿಣಾಮ ಬೀರುತ್ತವೆ. ಈ ಎಲ್ಲ ಪರಿಸ್ಥಿತಿಗಳನ್ನು ಮೀರಿ ಎಲ್ಲ  ಮಕ್ಕಳು ಗರಿಷ್ಠ ಮಟ್ಟದ ಕಲಿಕೆ ಸಾಧಿಸುವಂತೆ ಶಿಕ್ಷಕರು ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಯಶಸ್ಸು ಸಾಧಿಸುತ್ತಾರೆ. ಕಲಿಕಾ ಚೇತರಿಕೆ ಕಾರ್ಯಕ್ರಮದ ಅನುಷ್ಠಾನದಲ್ಲಿ ದೇಶದಲ್ಲೇ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ. ಕೇಂದ್ರ ಸರ್ಕಾರ ಕೂಡ ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ’ ಎಂದು ಸಚಿವ ನಾಗೇಶ್ ಹೇಳಿದರು. 
 
ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್. ಸೆಲ್ವಕುಮಾರ್, ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕರಾದ ದೀಪಾ ಚೋಳನ್, ಡಿಎಸ್‌ಇಆರ್‌ಟಿ ನಿರ್ದೇಶಕರಾದ ಸುಮಂಗಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

'ಜ್ಞಾನೇಂದ್ರ ವಜಾ ಮಾಡಿ'