ಬೆಂಗಳೂರು: ಎಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್ ಗಳ ಪ್ರವೇಶ ಪರೀಕ್ಷೆ ಸಿಇಟಿಗೆ ಅರ್ಜಿ ಸಲ್ಲಿಸಲು ಇದೇ ಮೊದಲ ಬಾರಿಗೆ ಎಐ ತಂತ್ರಜ್ಞಾನ ಬಳಸಲಾಗುತ್ತಿದೆ. ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸುವುದು ಹೇಗೆ ಇಲ್ಲಿದೆ ವಿವರ.
ನಿನ್ನೆಯಿಂದ ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಮೊದಲ ದಿನವೇ 3,738 ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಯಾರದ್ದೋ ಮಕ್ಕಳ ಅರ್ಜಿಯನ್ನು ಇನ್ಯಾರೋ ಸಲ್ಲಿಸುವುದು, ಸೀಟ್ ಬ್ಲಾಕ್ ಮಾಡುವುದು ಇತ್ಯಾದಿ ಅಕ್ರಮಗಳನ್ನು ತಡೆಯುವ ಉದ್ದೇಶಕ್ಕಾಗಿ ಈ ಬಾರಿ ಎಐ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ.
ಮೊದಲ ಬಾರಿಗೆ ಇಂತಹದ್ದೊಂದು ಪ್ರಯೋಗ ಮಾಡಿದರೂ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ. ಫೆಬ್ರವರಿ 21 ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಮೊದಲ ಪುಟದಲ್ಲೇ ಇರುವ ವಿವರಣೆಗಳನ್ನು ಓದಿ ಮನನ ಮಾಡಿಕೊಂಡ ಬಳಿಕವೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭಿಸಬಹುದಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಪರೀಕ್ಷಾ ಪ್ರಾಧಿಕಾರ ವೆಬ್ ಸೈಟ್ ಗೆ ಹೋಗಿ ಹೈ ರೆಸಲ್ಯೂಷನ್ ಇರುವ ಬಿಳಿ ಬಣ್ಣದ ಹಿನ್ನಲೆಯಿರುವ ಫೋಟೋ ಅಪ್ ಲೋಡ್ ಮಾಡಬೇಕು. ಆಗ ಅಭ್ಯರ್ಥಿಗಳ ಫೋಟೋ ಸಾಫ್ಟ್ ವೇರ್ ನಲ್ಲಿ ಬರುತ್ತದೆ. ಬಳಿಕ ಲಾಗಿನ್ ಮಾಡಿಕೊಳ್ಳಬೇಕು. ಈ ವೇಳೆ ಒಟಿಪಿ, ಮುಖ ಚಹರೆ, ಆಧಾರ್ ಕಾರ್ಡ್ ಮಾಹಿತಿ ನೀಡಬೇಕು. ನಂತರ ಮುಖಚಹರೆ ಮೇಲೆ ಕ್ಲಿಕ್ ಮಾಡಿದರೆ ಈಗಾಗಲೇ ಅಪ್ ಲೋಡ್ ಆಗಿರುವ ಫೋಟೋ ಜೊತೆಗೆ ಅಭ್ಯರ್ಥಿಯ ಮುಖ ಚಹರೆಯನ್ನು ಹೋಲಿಕೆ ಮಾಡಲಾಗುತ್ತದೆ. ಒಂದು ವೇಳೆ ಎರಡು ಫೋಟೋಗಳಿಗೆ ಹೋಲಿಕೆಯಾಗದೇ ಇದ್ದರೆ ರಿಜೆಕ್ಟ್ ಆಗಬಹುದು. ಹೋಲಿಕೆಯಾದರೆ ತಕ್ಷಣವೇ ಲಾಗಿನ್ ತೆರೆಯುತ್ತದೆ. ಹೀಗಾಗಿ ಅರ್ಜಿ ಸಲ್ಲಿಸಲು ಆದಷ್ಟು ಇತ್ತೀಚೆಗಿನ ಭಾವಚಿತ್ರವನ್ನೇ ಬಳಸಿ.