ಬಳ್ಳಾರಿ: ಪಕ್ಷದ ವಿರುದ್ಧವೇ ಸಿಡಿದೆದ್ದಿರುವ ಬಳ್ಳಾರಿ ಬಿಜೆಪಿ ನಾಯಕ ಬಿ ಶ್ರೀರಾಮುಲುಗೆ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮಾಧ್ಯಮಗಳ ಮುಂದೆಯೇ ಕರೆ ಮಾಡಿದ್ದಾರೆ.
ನಿನ್ನೆ ರಾಜ್ಯ ಬಿಜೆಪಿ ಸಭೆಯಲ್ಲಿ ಜನಾರ್ಧನ ರೆಡ್ಡಿ ನನ್ನ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ ಎಂದು ಹಳೆಯ ಗೆಳೆಯನ ವಿರುದ್ಧ ಸಿಡಿದೆದ್ದಿದ್ದ ಶ್ರೀರಾಮುಲು ಬಳಿಕ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್ ಅಗರ್ವಾಲ್ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದರು.
ಇಂದು ಶ್ರೀರಾಮುಲು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ಜೋರಾಗಿ ಕೇಳಿಬರುತ್ತಿದ್ದವು. ಇದರ ಬೆನ್ನಲ್ಲೇ ಜನಾರ್ಧನ ರೆಡ್ಡಿ ಪತ್ರಿಕಾಗೋಷ್ಠಿ ನಡೆಸಿ ಡಿಕೆ ಶಿವಕುಮಾರ್ ಸಂಚಿನಿಂದ ಇಷ್ಟೆಲ್ಲಾ ನಡೆಯುತ್ತಿದೆ ಎಂದು ಆರೋಪಿಸಿದ್ದರು.
ಇದರ ಬೆನ್ನಲ್ಲೇ ಶ್ರೀರಾಮುಲು ಕಾಂಗ್ರೆಸ್ ಸೇರಲಿದ್ದಾರೆ ಎಂಬ ವದಂತಿ ಜೋರಾಗಿ ಹರಿದಾಡಿತ್ತು. ಶ್ರೀರಾಮುಲು ಬಳ್ಳಾರಿ ಬಿಜೆಪಿಯ ಪ್ರಮುಖ ನಾಯಕ. ಹೀಗಾಗಿ ಪಕ್ಷ ಅಷ್ಟು ಬೇಗ ಅವರನ್ನು ಬಿಟ್ಟುಕೊಡಲು ತಯಾರಿಲ್ಲ.
ಈ ಹಿನ್ನಲೆಯಲ್ಲಿ ಇಂದು ಶ್ರೀರಾಮುಲು ಮಾಧ್ಯಮಗಳ ಜೊತೆ ಇರುವಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾರಿಂದ ಕರೆ ಬಂದಿದೆ. ಯಾವುದೇ ಆತುರದ ತೀರ್ಮಾನ ತೆಗೆದುಕೊಳ್ಳದಂತೆ ಜೆಪಿ ನಡ್ಡಾ ಸಲಹೆ ನೀಡಿದ್ದಾರೆ. ಇದೆಲ್ಲದಕ್ಕೂ ಶ್ರೀರಾಮುಲು ಕೂಡಾ ಒಪ್ಪಿಕೊಂಡಿದ್ದು, ಎಲ್ಲಾ ನಿಮ್ಮ ಮುಂದೆ ವಿವರಿಸುವುದಾಗಿ ಸಮ್ಮತಿಸಿದ್ದಾರೆ. ಆ ಮೂಲಕ ಸದ್ಯಕ್ಕೆ ಶ್ರೀರಾಮುಲು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದೇ ಹೇಳಬಹುದು.