Select Your Language

Notifications

webdunia
webdunia
webdunia
webdunia

ಮಂತ್ರಾಲಯದಲ್ಲಿ ಕಣ್ಣಿಗೊತ್ತಿಕೊಳ್ಳುವ ತುಂಗೆಯ ಸ್ಥಿತಿ ಶಿವಮೊಗ್ಗದಲ್ಲಿ ಹೇಗಿದೆ ಕಂಡಿರಾ

Aniruddh Jathkar

Krishnaveni K

ಶಿವಮೊಗ್ಗ , ಶನಿವಾರ, 22 ಜೂನ್ 2024 (11:19 IST)
ಶಿವಮೊಗ್ಗ: ಮಂತ್ರಾಲಯದಲ್ಲಿ ರಾಯರ ದರ್ಶನಕ್ಕೆ ಹೋದಾಗ ತುಂಗಾ ನದಿ ನೀರನ್ನು ಕಣ್ಣಿಗೊತ್ತಿಕೊಂಡು ಪುಣ್ಯಸ್ನಾನ ಮಾಡುತ್ತೇವೆ. ಅದನ್ನು ತೀರ್ಥವೆಂದು ಸೇವಿಸುತ್ತೇವೆ. ಆದರೆ ಈ ತುಂಗಾ ನದಿ ಶಿವಮೊಗ್ಗದಲ್ಲಿ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ನಟ ಅನಿರುದ್ಧ್ ಜತ್ಕಾರ್ ಇತ್ತೀಚೆಗೆ ಅಲ್ಲಿಗೆ ಹೋಗಿದ್ದಾಗ ಕಣ್ಣಾರೆ ನೋಡಿ ಅಲ್ಲಿನ ಅವ್ಯವಸ್ಥೆ ಬಗ್ಗೆ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ.

ಶಿವಮೊಗ್ಗದ ಮೂಲಕ ಹಾದು ಹೋಗುವ ತುಂಗಾ ನದಿ ನೀರಿನ ದುಸ್ಥಿತಿ ಬಗ್ಗೆ ನಟ ಅನಿರುದ್ಧ್ ಜತ್ಕಾರ್ ಜನರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ತಮ್ಮ ಚೆಫ್ ಚಿದಂಬರ ಸಿನಿಮಾ ಪ್ರಮೋಷನ್ ಕಾರ್ಯಕ್ರಮಕ್ಕೆ ತೆರಳಿದಾಗ ಈ ನದಿಯ ದುಸ್ಥಿತಿ ಕಂಡು ಇದರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಇದೇ ತುಂಗಾ ನದಿ ಮುಂದೆ ಹರಿಹರ, ಹೊಸಪೇಟೆಗೆ ಹೋಗುತ್ತದೆ. ಅಷ್ಟೇ ಅಲ್ಲ, ಬಳಿಕ ಮಂತ್ರಾಲಯದಲ್ಲಿ ರಾಯರ ದರ್ಶನಕ್ಕೆ ಹೋದಾಗ ಬಳಸುವುದೂ ಇದೇ ನದಿ ನೀರನ್ನು. ಆದರೆ ಈ ನದಿ ಶಿವಮೊಗ್ಗದಲ್ಲಿರುವ ಅವಸ್ಥೆ ನೋಡಿದರೆ ನಿಜಕ್ಕೂ ಶಾಕ್ ಆಗುವುದು ಸಹಜ. ಈ ನದಿಗೆ ಇಲ್ಲಿ ಚರಂಡಿ ನೀರು ಬಂದು ಸೇರುತ್ತದೆ. ನದಿಯಲ್ಲಿ ಗಿಡ-ಗಂಟುಗಳು ಬೆಳೆದಿದ್ದು, ಕೊಳಚೆ ಪ್ರದೇಶದಂತೆ ಕಾಣುತ್ತಿದೆ. ನದಿಗೆ ಸಾಕಷ್ಟು ಕಸ ಸೇರುತ್ತಿದೆ. ಈ ಭಾಗಕ್ಕೆ ಬಂದರೆ ಕೊಳಚೆಗೆ ಬಂದಂತೆ ಕೆಟ್ಟ ವಾಸನೆ ಬರುತ್ತಿದೆ.

webdunia
ಈ ನದಿಯ ಸ್ವಚ್ಛತೆ ಬಗ್ಗೆ ಯಾರೂ ಗಮನ ಕೊಡುತ್ತಿಲ್ಲ ಎನ್ನುವುದು ವಿಪರ್ಯಾಸ. ವಿಚಿತ್ರವೆಂದರೆ ಈ ನದಿಯ ಒಂದು ಬದಿಗೆ ಎತ್ತರವಾದ ತಡೆಗೋಡೆ ನಿರ್ಮಿಸಲಾಗಿದೆ. ಆದರೆ ಆ ಗೋಡೆ ಅಲ್ಲಿ ಅಗತ್ಯವೇ ಇರಲಿಲ್ಲ. ಇಲ್ಲಿನ ಸ್ಥಳೀಯರನ್ನು ವಿಚಾರಿಸಿದಾಗ ಈ ಯೋಜನೆಗೆ 103 ಕೋಟಿ ರೂ. ಖರ್ಚಾಗಿದೆ ಎಂದು ಮಾಹಿತಿ ಸಿಕ್ಕಿದೆ ಎಂದು ನಟ ಅನಿರುದ್ಧ್ ಹೇಳಿದ್ದಾರೆ. ಇಷ್ಟು ಎತ್ತರದ ಗೋಡೆಯಿಂದ ಅಪಾಯವೇ ಹೆಚ್ಚು. ಮಕ್ಕಳು ಅಥವಾ ಯಾರಾದರೂ ಇಲ್ಲಿಂದ ಬೀಳುವ ಅಪಾಯವಿದೆ. ಅದರ ಬದಲು ಮೆಟ್ಟಿಲುಗಳನ್ನು ನಿರ್ಮಿಸಿ ಜನರು ಬಂದು ಕೂತು ನದಿಯನ್ನು ವೀಕ್ಷಿಸುವ ರೀತಿ ಮಾಡಿದ್ದರೆ ಜನರಿಗೆ ಉಪಯೋಗವಾಗುತ್ತಿತ್ತು. ಜೊತೆಗೆ ನದಿ ನೀರಿಗೆ ಕಸ-ಕಡ್ಡಿ ಅಥವಾ ಚರಂಡಿ ನೀರು ಬಾರದಂತೆ ತಡೆದರೆ ಈ ನದಿ ನೀರು ಬಳಕೆಗೆ ಯೋಗ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.

ನದಿಗಳನ್ನು ನಾವು ದೇವರೆಂದು ಪೂಜಿಸುತ್ತೇವೆ. ನದಿ ತಾಯಿ ಸಮಾನ. ಇದೇ ನೀರು ಮಂತ್ರಾಲಯಕ್ಕೆ ಹೋಗುತ್ತದೆ. ಅಲ್ಲಿ ನಾವು ಪೂಜ್ಯ ಭಾವನೆಯಿಂದ ಅದನ್ನು ಸೇವಿಸುತ್ತೇವೆ. ಆದರೆ ಈ ನದಿ ನೀರಿಗೆ ಇಂತಹ ಕಲ್ಮಶಗಳೆಲ್ಲಾ ಸೇರಿ ಅದನ್ನೇ ನಾವು ಸೇವಿಸಿದರೆ ಅದು ಎಷ್ಟು ಅಪಾಯಕಾರಿ. ಹೀಗಾಗಿ ದಯವಿಟ್ಟು ನಮ್ಮ ಅಧಿಕಾರಿಗಳು, ಜನಪ್ರತಿನಿಧಿಗಳು ಈ ನದಿಯ ಅವ್ಯವಸ್ಥೆ ಸರಿಪಡಿಸಬೇಕು ಎಂದು ಕೇಳಿಕೊಳ್ಳುತ್ತೇನೆ ಎಂದು ಅನಿರುದ್ಧ್ ಮನವಿ ಮಾಡಿದ್ದಾರೆ.

ನದಿಗಳು ನಮ್ಮ ಜೀವನಾಡಿ. ಅವುಗಳನ್ನು ಸ್ವಚ್ಛವಾಗಿಟ್ಟುಕೊಂಡರೆ ಅದು ಎಷ್ಟೋ ಜನರಿಗೆ ಬದುಕು ನೀಡುತ್ತದೆ. ಆದರೆ ಅದನ್ನೇ ಮಲಿನಗೊಳಿಸಿದರೆ ಅದು ನಮಗೆ ವಿಷವಾಗಬಹುದು. ತುಂಗಾ ನದಿ ಎಂದರೆ ನಮ್ಮ ಪ್ರಮುಖ ನದಿಗಳಲ್ಲೊಂದು. ಅದನ್ನು ಸ್ವಚ್ಛವಾಗಿ, ಸುಂದರವಾಗಿ ಕಾಪಾಡುವುದು ನಮ್ಮ ಹೊಣೆ. ನದಿಯ ಸುಧಾರಣೆ ಹೆಸರಿನಲ್ಲಿ ಕೋಟಿ ಕೋಟಿ ಹಣ ಪೋಲು ಮಾಡುವ ಬದಲು ಸರಿಯಾಗಿ ಯೋಜನೆ ರೂಪಿಸಿ ಅವುಗಳು ಉಪಯೋಗಕ್ಕೆ ಲಭ್ಯವಾಗುವಂತೆ ಮಾಡುವುದು ಜನನಾಯಕರ, ಅಧಿಕಾರಿಗಳ ಹೊಣೆಯಾಗಿರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯೋಗ ಮಾಡುವಾಗ ಥಕ ಥೈ: ಟ್ರೋಲ್ ಆದ ಡಿಕೆ ಶಿವಕುಮಾರ್