Publish Date: Mon, 03 Sep 2018 (15:20 IST)
Updated Date: Mon, 03 Sep 2018 (15:38 IST)
ಚುನಾವಣೆ ಮುಗಿದರೂ ಸೋತ ಮತ್ತು ಗೆದ್ದ ಅಭ್ಯರ್ಥಿಗಳ ಮುಸುಕಿನ ಗುದ್ದಾಟ ನಿಂತಿಲ್ಲ. ಅಭ್ಯರ್ಥಿ ಗೆದ್ದ ಸಂಭ್ರಮಕ್ಕಾಗಿ ಮೆರವಣಿಗೆ ಮಾಡುತ್ತಿದ್ದ ವೇಳೆ ಆಸೀಡ್ ರೂಪದ ರಾಸಾಯನಿಕ ದಾಳಿ ನಡೆಸಿದ ಘಟನೆ ನಡೆದಿದೆ.
ತುಮಕೂರು ಮಹಾನಗರ ಪಾಲಿಕೆ ಚುನಾವಣೆಯ ಇಂದು ನಡೆದ ಮತ ಎಣಿಕೆಯಲ್ಲಿ ವಾರ್ಡ್ ನಂಬರ್ 16 ರ ಕಾಂಗ್ರೆಸ್ ಸದಸ್ಯ ಇನಾಯತುಲ್ಲಾ ಖಾನ್ ಗೆಲುವು ಸಾಧಿಸಿದ್ದರು. ಅದರ ಸಂಭ್ರಮಕ್ಕಾಗಿ ಮೆರವಣಿಗೆ ಮಾಡುತ್ತಿದ್ದ ವೇಳೆ ಆಸೀಡ್ ರೂಪದ ರಾಸಾಯನಿಕ ದಾಳಿ ನಡೆಸಲಾಗಿದೆ. ವಾರ್ಡ್ ನಂಬರ್ 16 ರ ಬಾರ್ ಲೈನ್ ರಸ್ತೆಯಲ್ಲಿ ಘಟನೆ ನಡೆದಿದ್ದು,
ರಾಸಾಯನಿಕ ದಾಳಿಯಿಂದ 10 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರಿಗೆ ನಗರದ ಕೋತಿ ತೋಪಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದ್ದು, ಚುನಾವಣೆಯಲ್ಲಿ ಸೋತ ಕಡೆಯವರು ಕೃತ್ಯವೆಸಗಿರಬಹುದೆಂದು ಶಂಕೆ ವ್ಯಕ್ತಪಡಿಸಲಾಗುತ್ತಿದೆ.